Maddur, Mandya : ರಾಷ್ಟ್ರೀಯ ಹೆದ್ದಾರಿ 275ರ (NH-275) ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯಿಂದ (Bangalore-Mysore National Highway) ಸರ್ವಿಸ್ ರಸ್ತೆ (Service Road) ನಿರ್ಮಾಣಕ್ಕಾಗಿ ಆಗ್ರಹಿಸಿ ಮದ್ದೂರು ತಾಲ್ಲೂಕಿನ ಅಗರಲಿಂಗನದೊಡ್ಡಿ (Agaralinganadoddi) ಗ್ರಾಮದ ಗ್ರಾಮಸ್ಥರು ರಸ್ತೆಗೆ ಪೆಂಡಾಲ್ ಹಾಕಿ ಭಾನುವಾರ ಪ್ರತಿಭಟನೆ ಮಾಡಿದರು.
ಗ್ರಾಮದಲ್ಲಿ ರಾಷ್ಟ್ರೀಯ ಹೆದ್ದಾರಿ 275ರ (National Highway 275) ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ ಹಾದು ಹೋಗಿದ್ದು, ದಿಲೀಪ್ ಬಿಲ್ಡ್‌ಕಾನ್ ಸಂಸ್ಥೆಯು ರಸ್ತೆ ನಿರ್ಮಾಣ ಮಾಡುತ್ತಿದೆ. ಗ್ರಾಮಕ್ಕೆ ಸರ್ವಿಸ್ ರಸ್ತೆ ನಿರ್ಮಿಸುವ ಸಂಬಂಧ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೂ ಮುನ್ನ ಭರವಸೆ ನೀಡಿದ್ದ ಅಧಿಕಾರಿಗಳು ಇದುವರೆಗೂ ಈ ಕೆಲಸ ಮಾಡಿಲ್ಲ ಎಂದು ಗ್ರಾಮದ ಮುಖಂಡರಾದ ಬೊಮ್ಮೇಗೌಡ ಹೇಳಿದರು.
ರೈತರು ಜಮೀನಿಗೆ ತೆರಳಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ. ಮನವಿಗೆ ಸ್ಪಂದಿಸದ ಅಧಿಕಾರಿಗಳು ಕುಂಟು ನೆಪ ಹೇಳುತ್ತಿದ್ದಾರೆ. ಸರ್ವಿಸ್ ರಸ್ತೆ ನಿರ್ಮಾಣ ಮಾಡುವವರೆಗೂ ಪ್ರತಿಭಟನೆ ಮುಂದುವರಿಸುವುದಾಗಿ ಪ್ರತಿಭಟನಕಾರರು ಎಚ್ಚರಿಸಿದರು.
ನಿಂಗರಾಜು, ಸತೀಶ್, ಆದರ್ಶ್, ಬಸವರಾಜು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.