Chamarajnagara : ಕೋವಿಡ್ (Covid-19) ಹರಡುವಿಕೆ ನಿಯಂತ್ರಣ ಹಾಗೂ ಲಸಿಕಾಕರಣದ (Vaccination) ಪ್ರಗತಿಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ (Deputy Commissioner Charulata Somal) ಭಾನುವಾರ ಅಧಿಕಾರಿಗಳ ಸಭೆ ನಡೆಸಿದರು.
ಸಭೆಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿಗಳು ವಿಶೇಷ ಅಭಿಯಾನ ಮಾದರಿಯಲ್ಲಿ ತೆಗೆದುಕೊಂಡು ಜಿಲ್ಲೆಯಲ್ಲಿ ಕೋವಿಡ್ ತಡೆಗಾಗಿ ಕೈಗೊಳ್ಳಲಾಗಿರುವ ಕೋವಿಡ್ ಲಸಿಕಾಕರಣವನ್ನು ಯಶಸ್ವಿಗೊಳಿಸಬೇಕು. ಮೊದಲ ಡೋಸ್ ನೀಡುವಲ್ಲಿ ಯಶಸ್ವಿಯಾಗಿದೆ. ಎರಡನೇ ಡೋಸ್ ನೀಡುವ ಕಾರ್ಯವು ಮತ್ತಷ್ಟು ಚುರುಕಾಗಬೇಕಿದೆ. ಯಾವ ಭಾಗದಲ್ಲಿ ಎರಡನೇ ಡೋಸ್ ಲಸಿಕಾ ಕಾರ್ಯ ಇನ್ನು ಹೆಚ್ಚಿನ ಪ್ರಗತಿಯಾಗಬೇಕಿದೆಯೋ, ಅಂತಹ ಕಡೆ ವಿಶೇಷ ಆದ್ಯತೆ ನೀಡಿ ವಿಶೇಷ ಆಂದೋಲನದ ಮೂಲಕ ನಿಗದಿತ ಗುರಿ ಸಾಧಿಸಬೇಕು. ಜಿಲ್ಲೆಯಲ್ಲಿ 15ರಿಂದ 18 ವರ್ಷದ ಮಕ್ಕಳಿಗೆ ಕೋವಿಡ್ ಲಸಿಕೆ ನೀಡುವ ಕಾರ್ಯ ಆರಂಭವಾಗುತ್ತಿದ್ದು ಶಿಕ್ಷಣ ಇಲಾಖೆ, ಆರೋಗ್ಯ ಅಧಿಕಾರಿಗಳು ಲಸಿಕಾ ಅಭಿಯಾನಕ್ಕಾಗಿ ಸಿದ್ಧಪಡಿಸಲಾಗಿರುವ ಸೂಕ್ಷ್ಮ ಯೋಜನೆ ಅನುಸಾರ ಕಾರ್ಯೋನ್ಮುಖರಾಗಬೇಕು. ಪ್ರತಿ ದಿನದ ಲಸಿಕಾ ಕಾರ್ಯದ ಪ್ರಗತಿ ಪರಿಶೀಲಿಸಬೇಕು. ಕೋವಿಡ್ ಪರೀಕ್ಷೆ ಸಂಖ್ಯೆ ಹೆಚ್ಚಳ ಮಾಡಿ, ನಗರ, ಪಟ್ಟಣ ಪ್ರದೇಶಗಳಲ್ಲಿ ಮಾಸ್ಕ್ ಧರಿಸದೇ ಇರುವವರ ವಿರುದ್ಧ ದಂಡ ವಿಧಿಸಿ ರಾತ್ರಿ ಕರ್ಫ್ಯೂ ಅನ್ನು ಅತ್ಯಂತ ಬಿಗಿ ಕ್ರಮಗಳಿಂದ ಅನುಷ್ಠಾನ ಮಾಡಬೇಕು. ’ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ.ಗಾಯತ್ರಿ, ಹೆಚ್ಚುವರಿ ಜಿಲ್ಲಾಧಿಕಾರಿ ಎಸ್.ಕಾತ್ಯಾಯಿನಿದೇವಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಎಂ.ವಿಶ್ವೇಶ್ವರಯ್ಯ, ಜಿಲ್ಲಾಸ್ಪತ್ರೆಯ ಕೋವಿಡ್ ನೋಡೆಲ್ ಅಧಿಕಾರಿ ಡಾ.ಮಹೇಶ್, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಮಂಜುನಾಥ್, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಕೆ.ಸುರೇಶ್, ತಹಶೀಲ್ದಾರ್‌ಗಳಾದ ಚಿದಾನಂದ, ರವಿಶಂಕರ್, ನಾಗರಾಜು, ಜಯಪ್ರಕಾಶ್, ಇತರೆ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.