Bangarapet, Kolar : ಬಂಗಾರಪೇಟೆ ಪಟ್ಟಣದ ಸಾಂದೀಪನಿ ಶಾಲೆಯಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಏರ್ಪಡಿಸಿದ್ದ ಡಾ.ದ.ರಾ.ಬೇಂದ್ರೆ (Dr. D. R. Bendre) ಅವರ 126ನೇ ಜನ್ಮದಿನಾಚರಣೆ ಕಾರ್ಯಕ್ರಮವನ್ನು ಸಹ್ಯಾದ್ರಿ ಕಾಲೇಜು ಉಪನ್ಯಾಸಕ ದಿವಾಕರ್ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಉಪನ್ಯಾಸಕ ದಿವಾಕರ್ “ದ.ರಾ.ಬೇಂದ್ರೆಯವರು ಒಂದೇ ರೀತಿಯಲ್ಲಿ ಬದಕು ಮತ್ತು ಸಾಹಿತ್ಯವನ್ನು ಕಂಡವರು. ಬೇಂದ್ರೆ ನುಡಿದಂತೆ ನಡೆದವರು ಹಾಗೂ ನಡೆದಂತೆ ಬರೆದವರು. ಬಾಳನ್ನೇ ಹಾಡನ್ನಾಗಿ ಕೊಟ್ಟು, ಸಾಹಿತ್ಯ ಶ್ರೀಮಂತಿಕೆ ಮೆರೆದವರು ಬೇಂದ್ರೆ, ಅವರ ನಾಕುತಂತಿ ಕೃತಿಗೆ ಜ್ಞಾನಪೀಠ ಪ್ರಶಸ್ತಿ ಲಭಿಸಿರುವುದೇ ಅವರ ಸಾಹಿತ್ಯ ವಿಭಿನ್ನತೆ, ವೈಶಿಷ್ಟ್ಯಕ್ಕೆ ಸಾಟಿ” ಎಂದು ಹೇಳಿದರು.
ಕಾರ್ಯಕ್ರಮದ ಆರಂಭದಲ್ಲಿ ಈಚೆಗೆ ನಿಧನರಾದ ಭಾರತೀನಂಜುಂಡಪ್ಪ ಮತ್ತು ಪರಿಸರ ಪ್ರೇಮಿ ತ್ಯಾಗರಾಜು ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಶಾಲಾ ವಿದ್ಯಾರ್ಥಿಗಳು ಕಿತ್ತೂರು ರಾಣಿ ಚನ್ನಮ್ಮ ನಾಟಕ ಪ್ರಸ್ತುತಪಡಿಸಿದರು.
ಕಾರ್ಯಕ್ರಮದಲ್ಲಿ ಕಸಾಪ ತಾಲ್ಲೂಕು ಅಧ್ಯಕ್ಷ ಆರ್.ಸಂಜೀವಪ್ಪ, ಜಿಲ್ಲಾ ಕಸಾಪ ನಿಕಟಪೂರ್ವ ಗೌರವ ಕಾರ್ಯದರ್ಶಿ ಆರ್.ಅಶ್ವತ್ಥ್, ಸಾಂದೀಪನಿ ಪಬ್ಲಿಕ್ ಶಾಲೆ ಮುಖ್ಯ ಶಿಕ್ಷಕಿ ಎಂ.ಸುಜಾತ, ಕೋಲಾರ ಚುಟುಕು ಸಾಹಿತ್ಯ ಪರಿಷತ್ತು ಅಧ್ಯಕ್ಷ ಎಲ್.ರಾಮಕೃಷ್ಣಪ್ಪ, ಉಮಾದೇವಿ, ಪ್ರೇಮ, ನಾರಾಯಣಪ್ಪ, ಕೆ.ಜಿ.ಮಂಜುನಾಥ ಉಪಸ್ಥಿತರಿದ್ದರು.