Bengaluru: ಜಮಾತ್ ಉಲ್ ಉಗ್ರ ಸಂಘಟನೆಯ ಕೃತ್ಯಗಳಿಗೆ ಉತ್ತೇಜನ ನೀಡಿದ ಪ್ರಕರಣದಲ್ಲಿ ಬಾಂಗ್ಲಾದೇಶ ಪ್ರಜೆ ಜಾಹಿದುಲ್ ಇಸ್ಲಾಮ್ (Bangladeshi national Zahidul Islam) (ಅಲಿಯಾಸ್ ಕೌಸರ್) ಎಂಬಾತನಿಗೆ ಬೆಂಗಳೂರು NIA ವಿಶೇಷ ನ್ಯಾಯಾಲಯ ಏಳು ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿದೆ. ಡಕಾಯಿತಿ, ಪಿತೂರಿ, ಭಯೋತ್ಪಾದನೆಗೆ ನಿಧಿ ಸಂಗ್ರಹ, ಮದ್ದುಗುಂಡುಗಳ ಖರೀದಿಗೆ ಸಂಬಂಧಿಸಿದಂತೆ 57,000 ರೂ. ದಂಡವೂ ವಿಧಿಸಲಾಗಿದೆ. ಈ ಮೂಲಕ ಈ ಪ್ರಕರಣದಲ್ಲಿ ಒಟ್ಟು 11 ಮಂದಿಗೆ ಶಿಕ್ಷೆ ವಿಧಿಸಲಾಗಿದೆ.
2019ರಲ್ಲಿ, ಬುರ್ದ್ವಾನ್ ಸ್ಫೋಟದ ತನಿಖೆಯ ವೇಳೆ ಕೋಲ್ಕತ್ತಾ ಎನ್ಐಎ ಶಾಖೆಯಿಂದ ಲಭಿಸಿದ ಮಾಹಿತಿಯ ಆಧಾರದ ಮೇಲೆ ಬೆಂಗಳೂರು ಪೊಲೀಸರು ಪ್ರಕರಣ ದಾಖಲಿಸಿದ್ದರು. ಬಳಿಕ ಎನ್ಐಎ ಇದನ್ನು ತನಿಖೆ ನಡೆಸಿತು.
2005ರ ಸರಣಿ ಸ್ಫೋಟದ ಆರೋಪಿಯಿಂದಾಗಿ ಬಾಂಗ್ಲಾದೇಶದಲ್ಲಿ ಬಂಧಿತನಾಗಿದ್ದ ಜಾಹಿದುಲ್, 2014ರಲ್ಲಿ ಪರಾರಿಯಾಗಿ ಅಕ್ರಮವಾಗಿ ಭಾರತ ಪ್ರವೇಶಿಸಿದನು. ಬುರ್ದ್ವಾನ್ ಸ್ಫೋಟ ಮತ್ತು ನಂತರ ನಡೆದ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಭಾರತದ ವಿರುದ್ಧ ಪ್ರಚೋದನೆ ನೀಡಿದನು.
2018ರ ಬೋಧಗಯಾ ಸ್ಫೋಟಕ್ಕೂ ಜಾಹಿದುಲ್ ಜವಾಬ್ದಾರನಾಗಿದ್ದು, ಡಕಾಯಿತಿ ಮೂಲಕ ಹಣ ಸಂಗ್ರಹಿಸಿ ಮದ್ದುಗುಂಡು ಮತ್ತು ಅಡಗುತಾಣಗಳ ವ್ಯವಸ್ಥೆ ಮಾಡಿದ್ದನು. ಬೆಂಗಳೂರಿನಲ್ಲಿ ಯುವಕರನ್ನು ದೇಶ ವಿರೋಧಿ ಚಟುವಟಿಕೆಗಳಿಗೆ ಪ್ರಚೋದಿಸುತ್ತಿದ್ದನು ಎಂದು NIA ತನಿಖೆಯಲ್ಲಿ ಬೆಳಕಿಗೆ ಬಂದಿದೆ.