Bengaluru: ನಗರದ ದಕ್ಷಿಣ ವಲಯ ವ್ಯಾಪ್ತಿಯಲ್ಲಿ, BBMP ಆಯುಕ್ತರು “ಮುಖ್ಯ ಆಯುಕ್ತರ ನಡೆ ವಲಯದ ಕಡೆ” ಕಾರ್ಯಕ್ರಮದಲ್ಲಿ ಸಾರ್ವಜನಿಕ ಕುಂದು-ಕೊರತೆಗಳನ್ನು ಆಲಿಸಿದರು. ಅನಧಿಕೃತ ಕಟ್ಟಡಗಳ ನಿರ್ಮಾಣ ಮತ್ತು ಅಕ್ರಮ ಕಟ್ಟಡಗಳಿಗೆ ಸಂಬಂಧಿಸಿದಂತೆ ನಿರ್ಲಕ್ಷ್ಯ ತೋರಿದ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ಗಳಿಗೆ (AEE-Assistant Executive Engineers) ನೋಟಿಸ್ ಜಾರಿ ಮಾಡುವಂತೆ ಆಯುಕ್ತರು ವಲಯ ಆಯುಕ್ತ ವಿನೋತ್ ಪ್ರಿಯಾ ಅವರಿಗೆ ಸೂಚಿಸಿದರು.
ಸಾರ್ವಜನಿಕ ಕುಂದು-ಕೊರತೆಗಳು
- ಪಾರಿವಾಳಗಳ ಹಾವಳಿ.
- ದಕ್ಷಿಣ ವಲಯ ಕಚೇರಿ ಮತ್ತು ಸುತ್ತಮುತ್ತಲಿನ ಕಸದ ಸಮಸ್ಯೆ.
- ನಾಲ್ಕು ವರ್ಷಗಳಿಂದ ಪ್ರಗತಿಯಿಲ್ಲದ ಸಮುದಾಯ ಭವನ ಕಾಮಗಾರಿ.
- ಅಕ್ರಮ ಮತ್ತು ಅನಧಿಕೃತ ಕಟ್ಟಡಗಳ ಬಗ್ಗೆ AEEಗಳ ನಿರ್ಲಕ್ಷ್ಯ.
ಆಯುಕ್ತರು ದಕ್ಷಿಣ ವಲಯದ ಉದ್ಯಾನ, ಮೈದಾನ, ಮತ್ತು ಕೆರೆಗಳ ಸ್ಥಿತಿಗತಿಗಳನ್ನು ಪರಿಶೀಲನೆ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಿದರು. ಜಿಯೊ ಲೊಕೇಶನ್ ಮತ್ತು ಛಾಯಾಚಿತ್ರಗಳೊಂದಿಗೆ ವರದಿ ಸಲ್ಲಿಸುವಂತೆ ಹೇಳಿದರು.
ಗಾಂಧಿ ಬಜಾರ್ ಮಾರುಕಟ್ಟೆಯಲ್ಲಿ ಅನುಮತಿ ಪಡೆದ ಸ್ಥಳಗಳಲ್ಲಿ ಮಾತ್ರ ವ್ಯಾಪಾರ ನಡೆಸಲು ಸೂಚನೆ ನೀಡಿದ್ದು, ಫುಟ್‌ಪಾತ್‌ಗಳ ಒತ್ತುವರಿ ಶನಿವಾರದೊಳಗೆ ತೆರವುಗೊಳಿಸಬೇಕೆಂದು ಆದೇಶಿಸಿದರು.
ವಿವಿ ಪುರಂ ಮತ್ತು ಚಿಕ್ಕಪೇಟೆ ನಿವಾಸಿಗಳ ದೂರಿನ ಮೇಲೆ, ಧರ್ಮರಾಯ ಸ್ವಾಮಿ ದೇವಸ್ಥಾನದ ಉಪವಿಭಾಗದ ಎಇಇ ಕೃಷ್ಣಕುಮಾರ್ ಅವರ ವಿರುದ್ಧ ಕ್ರಮ ಕೈಗೊಳ್ಳಲು ಸೂಚನೆ ನೀಡಿದರು. ಡಿಸೆಂಬರ್ 26ರೊಳಗೆ ವರದಿ ಸಲ್ಲಿಸದಿದ್ದರೆ, ವಲಯ ಆಯುಕ್ತರು ಅವರನ್ನು ಅಮಾನತುಗೊಳಿಸಬೇಕು ಎಂದು ಆದೇಶಿಸಿದರು.
ಗುರುಪ್ಪನ ಪಾಳ್ಯದಲ್ಲಿ 4 ವರ್ಷದಿಂದ ತೆರೆದಿಲ್ಲದ ಸಮುದಾಯ ಭವನದ ಕಾಮಗಾರಿಯನ್ನು ಪೂರ್ಣಗೊಳಿಸಲು ಆವಶ್ಯಕ ಕ್ರಮ ಕೈಗೊಳ್ಳುವಂತೆ ಆಯುಕ್ತರು ಸೂಚಿಸಿದರು.