
Bengaluru: ಇದುವರೆಗೆ ಬಡಾವಣಾ ಅಭಿವೃದ್ಧಿ ಪ್ರಾಧಿಕಾರ (BDA)ಗೆ ಮಾತ್ರ ಇದ್ದ ಭೂ ಪರಿವರ್ತನೆ (ಲ್ಯಾಂಡ್ ಕನ್ವರ್ಷನ್) ಅಧಿಕಾರವನ್ನು ಈಗ ಮಹಾನಗರ ಪಾಲಿಕೆ (BBMP)ಗೆ ಹಸ್ತಾಂತರಿಸಲಾಗಿದೆ. ಇದರ ಫಲವಾಗಿ ಇನ್ನು ಮುಂದೆ ರೆವಿನ್ಯೂ ಜಾಗಗಳಿಗೆ (Revenue land) ನಕ್ಷೆ ಮಂಜೂರಾತಿ ಭಾಗ್ಯ ಸಿಗಲಿದೆ.
ಈ ನಿರ್ಧಾರದಿಂದ ರಾಜ್ಯ ಸರ್ಕಾರ ಮಹಾವೀರ ಜಯಂತಿಯಂದು ರೆವಿನ್ಯೂ ಜಾಗದ ಮಾಲೀಕರಿಗೆ ಶುಭವಾರ್ತೆ ನೀಡಿದೆ. ಜೊತೆಗೆ, ಬಿಬಿಎಂಪಿಗೆ ಸಾವಿರಾರು ಕೋಟಿ ರೂಪಾಯಿ ಆದಾಯವೂ ಆಗಲಿದೆ. ಸಾರ್ವಜನಿಕರ ಹಿತದೃಷ್ಟಿಯಿಂದ ಈ ನಿರ್ಧಾರಕ್ಕೆ ಸಂಬಂಧಿಸಿದಂತೆ ಸರ್ಕಾರ ಸುತ್ತೋಲೆ ಕೂಡ ಹೊರಡಿಸಿದೆ.
ಇದುವರೆಗೆ BDAಗೆ ಮಾತ್ರ ಭೂ ಪರಿವರ್ತನೆ ಅಧಿಕಾರ ಇತ್ತು. ಈಗ ನಗರ ಯೋಜನೆ ವಿಭಾಗದ ಎಡಿಟಿಪಿಗಳಿಗೆ ಈ ಅಧಿಕಾರ ನೀಡಲಾಗಿದೆ. ಅವರು ಭೂ ಪರಿವರ್ತನೆ ಮಾಡಿ, ಸುಧಾರಣಾ ಶುಲ್ಕ ಪಡೆದು, ನಕ್ಷೆ ಮಂಜೂರಾತಿ ನೀಡುವ ಅವಕಾಶವಿದೆ.
ಬಿ ಖಾತಾ ಹೊಂದಿರುವ ಜಾಗಗಳಿಗೆ ಇದುವರೆಗೆ ಕಟ್ಟಡ ಯೋಜನೆ (ಪ್ಲ್ಯಾನ್) ಮಂಜೂರಾತಿ ಸಿಗುತ್ತಿರಲಿಲ್ಲ. ಆದರೆ ಈಗ ಸರ್ಕಾರದ ಈ ಹೊಸ ಕ್ರಮದಿಂದ ಅವರ ಸಮಸ್ಯೆಗಳಿಗೆ ಪರಿಹಾರ ಸಿಕ್ಕಂತಾಗಿದೆ.
ವಿಧಾನಸೌಧದಲ್ಲಿ ರಾಷ್ಟ್ರೀಯ ಭೂಮಾಪನ ದಿನಾಚರಣೆ ನಡೆಯಿತು. ಈ ವೇಳೆ ಸಿಎಂ ಸಿದ್ದರಾಮಯ್ಯ 2 ವರ್ಷಗಳ ಭೂಮಾಪನ ಇಲಾಖೆಯ ಸಾಧನೆಗಳ ಕೈಪಿಡಿ ಬಿಡುಗಡೆ ಮಾಡಿದರು. ಜೊತೆಗೆ, ಆಧುನಿಕ ಸರ್ವೇ ಉಪಕರಣಗಳು ರೋವರ್‌ಗಳ ವಿತರಣೆಯೂ ನಡೆಯಿತು. ಗ್ರಾಮೀಣ ಪ್ರದೇಶಗಳ ನಕ್ಷೆಗಳ ಬಿಡುಗಡೆ ಸಹ “ಸ್ವಮಿತ್ವ ಯೋಜನೆ”ಡಿಯಲ್ಲಿ ನಡೆಯಿತು.
“7 ವರ್ಷಗಳ ಬಳಿಕ ಭೂಮಾಪನ ದಿನಾಚರಣೆ ಆಚರಿಸಲಾಗುತ್ತಿದೆ. ಸರ್ವೇ ಕೆಲಸ ಆಡಳಿತಕ್ಕೆ ಆಧಾರ. ಈಗ ಟೆಕ್ನಾಲಜಿ ಹೆಚ್ಚಾದರೂ, ಕೆಲಸದ ವಿಧಾನ ಬದಲಾಗಿಲ್ಲ. ರೋವರ್ ಖರೀದಿಗೆ ಟೆಂಡರ್ ಹಾಕಲಾಗಿದೆ. ಇದರೊಂದಿಗೆ ನೌಕರರ ಹೊರೆ ಕಡಿಮೆಯಾಗುತ್ತದೆ, ಕೆಲಸ ವೇಗವಾಗುತ್ತದೆ.” ಕಂದಾಯ ಸಚಿವ ಕೃಷ್ಣಬೈರೇಗೌಡ ಹೇಳಿದರು.