ಬೆಂಗಳೂರು: ಬೆಂಗಳೂರಿನ ಎಲ್ಲಾ ಆಸ್ತಿ ಮಾಲೀಕರು ಇ-ಖಾತಾ (e-khata) ಮಾಡಿಸುವುದು ಕಡ್ಡಾಯ ಎಂಬ ಸರ್ಕಾರದ ಆದೇಶದ ಅನಂತರ, ಬಿಬಿಎಂಪಿ ಅದರ ಅನುಷ್ಠಾನಕ್ಕೆ ತೀವ್ರ ಗಂಭೀರತೆ ನೀಡುತ್ತಿದೆ. BBMP ಕಚೇರಿಗಳು ಹಾಗೂ ಬೆಂಗಳೂರು ಒನ್ ಕೇಂದ್ರಗಳಲ್ಲಿ ಇದನ್ನು ಮಾಡಿಸಲು ಅವಕಾಶ ನೀಡಲಾಗಿತ್ತು. ಆದರೆ, ಇದುವರೆಗೆ ಇ-ಖಾತಾ ಮಾಡಿಸದವರಿಗೆ ಬಿಬಿಎಂಪಿ ಹೊಸ ಪ್ಲಾನ್ ರೂಪಿಸಿದ್ದು, 45 ದಿನಗಳ ವಿಶೇಷ ಅಭಿಯಾನ ನಡೆಸಲು ಸಜ್ಜಾಗಿದೆ.
ಬಿಬಿಎಂಪಿ ಎಂಟು ವಲಯಗಳಲ್ಲಿ ಈ ಅಭಿಯಾನವನ್ನು ಕೈಗೆತ್ತಿಕೊಂಡಿದ್ದು, 1 ಲಕ್ಷ ಖಾತಾ ಮಾಡಿಸುವ ಗುರಿ ಹೊಂದಿದೆ. ಈ ಮೂಲಕ ಆದಾಯವನ್ನು ಹೆಚ್ಚಿಸಿಕೊಳ್ಳಲು ಬಿಬಿಎಂಪಿ ಹೊಸ ಯೋಜನೆ ರೂಪಿಸಿದೆ.
ಖಾತಾ ಮಾಡಿದ ಬಳಿಕ ಮಾತ್ರ ತೆರಿಗೆ ಪಾವತಿ – ಹೊಸ ನಿಯಮ
- ಖಾತಾ ಮಾಡಿದ ನಂತರ ಆಸ್ತಿ ತೆರಿಗೆ ಪಾವತಿ ಕಡ್ಡಾಯ
- ತೆರಿಗೆ ಪಾವತಿಸಿದರಷ್ಟೇ ಖಾತಾ ಡೌನ್‌ಲೋಡ್ ಮಾಡುವ ಅವಕಾಶ
- ಈ ಯೋಜನೆಯಿಂದ 100 ಕೋಟಿ ರೂ. ಆದಾಯ ಲಭಿಸಬಹುದು ಎಂದು ಬಿಬಿಎಂಪಿ ಕಮಿಷನರ್ ತುಷಾರ್ ಗಿರಿನಾಥ್ ತಿಳಿಸಿದ್ದಾರೆ.
ಈ ಯೋಜನೆಯಿಂದ ಇ-ಖಾತಾ ಗೊಂದಲದಿಂದ ಸುಸ್ತಾದ ಮಾಲೀಕರಿಗೆ ಸ್ವಲ್ಪ ಅನುಕೂಲ ಸಿಗಬಹುದು. ಆದರೆ, ತೆರಿಗೆ ಪಾವತಿ ತಪ್ಪಿಸಿದ್ದ ಮತ್ತು ಖಾತಾ ಮಾಡಿಸದೇ ಇದ್ದ ಮಾಲೀಕರಿಗೆ ಈ ಹೊಸ ಉಪಾಯ ಬಿಸಿತುಪ್ಪ ಆಗಬಹುದು.