Bengaluru District : 2022ರ ಜನವರಿ 3 ರಿಂದ BBMP ವ್ಯಾಪ್ತಿಯಲ್ಲಿ 15 ವರ್ಷದಿಂದ 18 ವರ್ಷದೊಳಗಿನ 5 ಲಕ್ಷ ಹರೆಯರಿಗೆ ಕೋವಿಡ್ ಲಸಿಕೆ (Covid-19 Vaccine) ನೀಡುವ ಪ್ರಕ್ರಿಯೆ ಆರಂಭವಾಗಲಿದೆ. ಮಕ್ಕಳಿಗೆ ಲಸಿಕೆ ನೀಡುವ ಕಾರ್ಯಕ್ರಮದ ಅನುಷ್ಠಾನಕ್ಕೆ ಆಯಾ ವಲಯ ವ್ಯಾಪ್ತಿಯಲ್ಲಿ ಸಕಲ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಮಂಗಳವಾರ ನಡೆದ ಕೋವಿಡ್ ನಿಯಂತ್ರಣ ಸಂಬಂಧ ವರ್ಚುವಲ್ ಸಭೆಯಲ್ಲಿ (Virtual Meeting) ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ಅಧಿಕಾರಿಗಳಿಗೆ ತಿಳಿಸಿದರು.
ಪಾಲಿಕೆ ವ್ಯಾಪ್ತಿಯ ಸರ್ಕಾರಿ ಹಾಗೂ ಖಾಸಗಿ ಶಾಲಾ-ಕಾಲೇಜುಗಳ ಪಟ್ಟಿಯನ್ನು ವಲಯವಾರು ಸಿದ್ಧಪಡಿಸಿಕೊಂಡು ಲಸಿಕೆ ನೀಡುವ ಸಿಬ್ಬಂದಿಯನ್ನು ಈ ಎಲ್ಲಾ ಶಾಲಾ-ಕಾಲೇಜುಗಳಿಗೆ ನಿಯೋಜಿಸಬೇಕು. ಶಾಲೆ ತೊರೆದ 15 ವರ್ಷದಿಂದ 18 ವರ್ಷದೊಳಗಿನ ಮಕ್ಕಳನ್ನು ಸರ್ಕಾರೇತರ ಸಂಸ್ಥೆಗಳ ಜೊತೆ ಸೇರಿ ಪತ್ತೆ ಹಚ್ಚಿ ಲಸಿಕೆ ನೀಡಬೇಕು. ಕೊಳೆಗೇರಿ ಪ್ರದೇಶ, ಕೈಗಾರಿಕಾ ಪ್ರದೇಶಗಳಲ್ಲಿ ಈ ಕುರಿತು ಹೆಚ್ಚಿನ ನಿಗಾ ಅಗತ್ಯ ಎಂದು ಆಯುಕ್ತರು ತಿಳಿಸಿದರು.
ಜನವರಿ 10 ರಿಂದ ಆರೋಗ್ಯ ಕಾರ್ಯಕರ್ತರು (Health Workers), ಕೋವಿಡ್ ನಿಯಂತ್ರಣ ಕಾರ್ಯದಲ್ಲಿ ಮುಂಚೂಣಿಯಲ್ಲಿರುವ ಕಾರ್ಯಕರ್ತರು (Frontline Workers) ಹಾಗೂ 60 ವರ್ಷ ಮೇಲ್ಪಟ್ಟವರಿಗೆ ಮುನ್ನೆಚ್ಚರಿಕೆ ಡೋಸ್ (Booster Dose) ನೀಡುವುದಕ್ಕೂ ಪೂರ್ವಸಿದ್ಧತೆಗಳನ್ನು ಮಾಡಿಕೊಳ್ಳಬೇಕು ಎಂದು ಗೌರವ್ ಗುಪ್ತ ಅಧಿಕಾರಿಗಳಿಗೆ ಸೂಚಿಸಿದರು.