Bengaluru : ಬೆಂಗಳೂರು ನಗರದ ಜೆಸಿ ರಸ್ತೆಯ (J C Road) ರವೀಂದ್ರ ಕಲಾ ಕ್ಷೇತ್ರದಲ್ಲಿ (Ravindra Kala Kshetra) ಭಾನುವಾರ ಮೈಕೊ ಕನ್ನಡ ಬಳಗ (MICO Kannada Balaga) ವತಿಯಿಂದ 8ನೇ ‘Robert Bosch ಕನ್ನಡ ಸಾಹಿತ್ಯ ಸೇವಾ ಪ್ರಶಸ್ತಿ’ ಪ್ರದಾನ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ಸಾಹಿತಿ ಜ್ಞಾನಪೀಠ ಪುರಸ್ಕೃತ ಪದ್ಮಭೂಷಣ ಚಂದ್ರಶೇಖರ ಕಂಬಾರ (Chandrashekhara Kambara) ಅವರಿಗೆ ₹ 1 ಲಕ್ಷ ನಗದು ಒಳಗೊಂಡ ‘ರಾಬರ್ಟ್ ಬಾಷ್ ಕನ್ನಡ ಸಾಹಿತ್ಯ ಸೇವಾ ಪ್ರಶಸ್ತಿ’ ಪ್ರದಾನ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷೆ ಬಿ. ಮಂಜಮ್ಮ ಜೋಗತಿ “ಇಂಗ್ಲಿಷ್ ಮಾಧ್ಯಮ ಶಿಕ್ಷಣದಿಂದ ನಮ್ಮ ಸಂಸ್ಕೃತಿ ನಾಶವಾಗಲಿದ್ದು ನಮ್ಮ ಭಾಷೆ, ಸಂಸ್ಕೃತಿ ಮತ್ತು ಜಾನಪದದ ಉಳಿವಿಗೆ ಕನ್ನಡ ಮಾಧ್ಯಮ ಶಿಕ್ಷಣ ಅಗತ್ಯವಿದ್ದು ಮಕ್ಕಳನ್ನು 1 ರಿಂದ 10 ನೇ ತರಗತಿವರೆಗೆ ಕಡ್ಡಾಯವಾಗಿ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಓದಿಸಬೇಕು. ಹಾಗೆಂದು ಇಂಗ್ಲಿಷ್ ಭಾಷೆಯನ್ನು ವಿರೋಧಿಸಬೇಕಿಲ್ಲ. ನಮ್ಮ ಭಾಷೆಯನ್ನು ಉಳಿಸಿ, ಆಂಗ್ಲ ಭಾಷೆಯನ್ನು ಬೆಳೆಸಬೇಕು. ಸರ್ಕಾರಿ ಶಾಲೆಯಲ್ಲಿಯೂ ಉತ್ತಮ ಶಿಕ್ಷಣ ದೊರೆಯುತ್ತದೆ. ಸರ್ಕಾರಿ ಉದ್ಯೋಗ ಬೇಕು, ಅಲ್ಲಿನ ಶಿಕ್ಷಣ ಬೇಡ ಅನ್ನುವುದು ಸರಿಯಲ್ಲ” ಎಂದು ಹೇಳಿದರು.
ಮೈಕೊ ಕನ್ನಡ ಬಳಗದ ಗೌರವಾಧ್ಯಕ್ಷೆ ಪದ್ಮಿನಿ ನಾಗರಾಜು, ಮಹೇಶ ಜೋಶಿ, ಬಾಷ್ ಕಂಪನಿಯ ಬಿಡದಿ ಘಟಕದ ಅಧಿಕಾರಿ ಎಚ್.ಬಿ. ತೊಂಟೇಶ್, ವಿ.ಜೆ.ಕೆ. ನಾಯರ್, ಮೈಕೊ ಕನ್ನಡ ಬಳಗ ಪದಾಧಿಕಾರಿ ಸಂಗಣ್ಣ ಸಾಹುಕಾರ ಮತಿತ್ತರರು ಉಪಸ್ಥಿತರಿದ್ದರು.