Kolar: ಬೆಸ್ಕಾಂ (BESCOM) ಉಗ್ರಾಣದಲ್ಲಿರುವ ವಿದ್ಯುತ್ ತಂತಿ ಮತ್ತು ಮೌಲ್ಯವಂತಾದ ಪರಿಕರಗಳನ್ನು ಟೆಂಡರ್ ಇಲ್ಲದೆ ಕಳ್ಳತನ ಮಾಡಿ ಮಾರಾಟ ಮಾಡಿದ ಆರೋಪ ಬೆಸ್ಕಾಂ (BESCOM scam in Kolar) ಎಂಜಿನಿಯರ್‌ಗಳು ಮತ್ತು ಸಿಬ್ಬಂದಿಯ ಮೇಲೆ ಕೇಳಿಬಂದಿದೆ.
ಸಾಮಾಜಿಕ ಕಾರ್ಯಕರ್ತ ಕೆ.ಸಿ. ರಾಜಣ್ಣ ಅವರು ನೀಡಿದ ದೂರಿನ ಮೇಲೆ ಕೋಲಾರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಎಂಜಿನಿಯರ್‌ಗಳು ಕರಿಮುಲ್ಲಾ ಹುಸೇನಿ, ನಹೀದ್ ಪಾಷಾ, ಜನಾರ್ದನ್ ಹಾಗೂ ಇತರರು ಆರೋಪಿಗಳಾಗಿದ್ದಾರೆ.
ಬೆಂಗಳೂರು ಮುಖ್ಯ ರಸ್ತೆಯಲ್ಲಿರುವ ಬೆಸ್ಕಾಂ ಉಗ್ರಾಣದಿಂದ ಸುಮಾರು ₹2.10 ಕೋಟಿ ಮೌಲ್ಯದ ವಿದ್ಯುತ್ ಸಾಮಗ್ರಿಗಳನ್ನು ವಾಹನಗಳಲ್ಲಿ ಕಳ್ಳತನ ಮಾಡಿ ಮಾರಾಟ ಮಾಡಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ವೀಡಿಯೋಗಳು ಮತ್ತು ದಾಖಲೆಗಳನ್ನೂ ಪೊಲೀಸರು ಪಡೆದಿದ್ದಾರೆ.
ಪ್ರಾಥಮಿಕ ವಿಚಾರಣೆಗಾಗಿ ಬೆಸ್ಕಾಂ ಕಚೇರಿಗೆ ನೋಟಿಸ್ ಕಳುಹಿಸಿದ್ದರೂ ಪ್ರತಿಕ್ರಿಯೆ ಸಿಕ್ಕಿಲ್ಲ. ಇದರ ಪರಿಣಾಮವಾಗಿ ಪೊಲೀಸರು ನೇರವಾಗಿ ಪ್ರಕರಣ ದಾಖಲಿಸಿದ್ದಾರೆ.
ಪ್ರಕರಣದ ನಂತರ ಪ್ರಮುಖ ಎಂಜಿನಿಯರ್‌ಗಳು ಸೇರಿದಂತೆ 15ಕ್ಕಿಂತ ಹೆಚ್ಚು ಸಿಬ್ಬಂದಿ ಮತ್ತು ವಾಹನ ಚಾಲಕರು ತಲೆಮರೆಸಿರುವುದು ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಹಿರಿಯ ಅಧಿಕಾರಿಗಳ ಪಾತ್ರವಿರಬಹುದೆಂಬ ಶಂಕೆಯೂ ಇದೆ.
ಈ ಕುರಿತು ಪ್ರತಿಕ್ರಿಯೆ ನೀಡಿದ ಸಂಸದ ಮಲ್ಲೇಶ್ ಬಾಬು, “ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದ ನಂತರ ಭ್ರಷ್ಟಾಚಾರ ಹೆಚ್ಚಾಗಿದೆ. ಜಿಲ್ಲೆಯ ಹಲವಾರು ಇಲಾಖೆಗಳಲ್ಲಿ ಈ ರೀತಿ ಅವ್ಯವಹಾರಗಳು ನಡೆಯುತ್ತಿವೆ,” ಎಂದು ಟೀಕಿಸಿದರು.