ಇಂಡಿಯನ್ ಪ್ರೀಮಿಯರ್ ಲೀಗ್ (IPL) 2025ರ 18ನೇ ಆವೃತ್ತಿ ಮಾರ್ಚ್ 22 ರಿಂದ ಆರಂಭವಾಗಲಿದೆ. ಎಲ್ಲಾ ತಂಡಗಳು ಈ ಮಿಲಿಯನ್ ಡಾಲರ್ ಟೂರ್ನಿಗಾಗಿ ಸಜ್ಜಾಗಿದ್ದು, ಡೆಲ್ಲಿ ಕ್ಯಾಪಿಟಲ್ಸ್‌ಗೆ (Delhi Capitals) ದೊಡ್ಡ ಆಘಾತವೊಂದು ಎದುರಾಗಿದೆ. ತಂಡ 6.25 ಕೋಟಿ ಕೊಟ್ಟು ಖರೀದಿಸಿದ್ದ ಇಂಗ್ಲೆಂಡ್ ಬ್ಯಾಟ್ಸ್‌ಮನ್ ಹ್ಯಾರಿ ಬ್ರೂಕ್ ಈ ಬಾರಿಯ ಐಪಿಎಲ್ ಅನ್ನು ಮಿಸ್ ಮಾಡಿಕೊಳ್ಳುತ್ತಿದ್ದಾರೆ.
ಬ್ರೂಕ್ ತಮ್ಮ ನಿರ್ಧಾರವನ್ನು ಸಾಮಾಜಿಕ ಮಾಧ್ಯಮದಲ್ಲಿ ಘೋಷಣೆ ಮಾಡಿದ್ದು, ಮುಂದಿನ ಇಂಗ್ಲೆಂಡ್ ತಂಡದ ಏಕದಿನ ಮತ್ತು ಟೆಸ್ಟ್ ಸರಣಿಗಳಿಗೆ ಗಮನಹರಿಸಲು ಈ ಹೆಜ್ಜೆ ಇಟ್ಟಿರುವುದಾಗಿ ತಿಳಿಸಿದ್ದಾರೆ. ಅವರ ಈ ನಿರ್ಧಾರ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಅಭಿಮಾನಿಗಳಿಗೆ ಆಘಾತ ತಂದಿದೆ.
ಇದು ಎರಡನೇ ಬಾರಿ ಬ್ರೂಕ್ IPLನಿಂದ ಹಿಂದೆ ಸರಿಯುತ್ತಿರುವುದು. 2024ರಲ್ಲಿ ವೈಯಕ್ತಿಕ ಕಾರಣಗಳಿಂದ ಅವರು ಆಡಿರಲಿಲ್ಲ. IPL ಆಡಳಿತ ಮಂಡಳಿಯ ಹೊಸ ನಿಯಮಗಳ ಪ್ರಕಾರ, ಹರಾಜಿನಲ್ಲಿ ಮಾರಾಟವಾದ ಆಟಗಾರನು ಸೂಕ್ತ ಕಾರಣವಿಲ್ಲದೆ ಹಿಂದೆ ಸರಿದರೆ, ಅವನಿಗೆ ಎರಡು ವರ್ಷದ ನಿಷೇಧದ ಶಿಕ್ಷೆ ವಿಧಿಸಬಹುದು. ಈ ಕಾರಣದಿಂದಾಗಿ ಬ್ರೂಕ್ ಎರಡು ವರ್ಷಗಳ ಐಪಿಎಲ್ ಬ್ಯಾನ್ ಎದುರಿಸಬಹುದೆಂಬ ಅನುಮಾನ ವ್ಯಕ್ತವಾಗಿದೆ.
2025ರ ಚಾಂಪಿಯನ್ಸ್ ಟ್ರೋಫಿಯ ಸೋಲಿನ ನಂತರ ಇಂಗ್ಲೆಂಡ್ ತಂಡದಲ್ಲಿ ಬದಲಾವಣೆಗಳು ನಡೆಯುತ್ತಿದ್ದು, ಜೋಸ್ ಬಟ್ಲರ್ ನಾಯಕತ್ವದಿಂದ ಕೆಳಗಿಳಿದಿದ್ದಾರೆ. ಬ್ರೂಕ್ ಅವರನ್ನು ಮುಂದಿನ ನಾಯಕನನ್ನಾಗಿ ನೇಮಿಸುವ ಸಾಧ್ಯತೆ ಇರುವ ಕಾರಣ ಅವರು ಈ ನಿರ್ಧಾರ ಕೈಗೊಂಡಿರಬಹುದು.
ಈ ನಿರ್ಧಾರ ಡೆಲ್ಲಿ ಕ್ಯಾಪಿಟಲ್ಸ್‌ಗೆ ದೊಡ್ಡ ಹೊಡೆತ ನೀಡಿದರೂ, ತಂಡ ತಕ್ಷಣವೇ ಬದಲಿಗೆ ಯಾರನ್ನು ಆಯ್ಕೆ ಮಾಡಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ!