Bihar: ಮುಂಬರುವ ವಿಧಾನಸಭಾ ಚುನಾವಣೆಗೆ ಮುನ್ನ ಬಿಹಾರದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ (SIR) ಪ್ರಕ್ರಿಯೆಗೆ ತಾತ್ಕಾಲಿಕ ತಡೆ ನೀಡುವಂತೆ ಕೇಳಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ.
ಚುನಾವಣಾ ಆಯೋಗದ ಪ್ರಕಾರ, ನಗರ ವಲಸೆ, ಯುವ ಜನರ ಮತದಾನ ಅರ್ಹತೆ ಮತ್ತು ಅಕ್ರಮ ವಿದೇಶಿಗರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪರಿಷ್ಕರಣೆ ಅಗತ್ಯವಾಯಿತು.
ಈ ವಿಚಾರವನ್ನು ಸುಪ್ರೀಂ ಕೋರ್ಟ್ ಮತ್ತೊಮ್ಮೆ ಪರಿಶೀಲಿಸಲು ಒಪ್ಪಿಕೊಂಡಿದ್ದು, ಮುಂದಿನ ವಿಚಾರಣೆ ಜುಲೈ 10ಕ್ಕೆ ನಿಗದಿಪಡಿಸಿದೆ. ಹಿರಿಯ ವಕೀಲ ಕಪಿಲ್ ಸಿಬಲ್ ಅವರು ಈ ವಿಷಯವನ್ನು ತ್ವರಿತ ವಿಚಾರಣೆಗಾಗಿ ಪ್ರಸ್ತಾಪಿಸಿದರು.
ಮಾಜಿ ಶಾಸಕ ಮುಜಾಹಿದ್ ಆಲಂ ಹಾಗೂ ಅಸೋಸಿಯೇಷನ್ ಆಫ್ ಡೆಮಾಕ್ರಟಿಕ್ ರಿಫಾರ್ಮ್ಸ್ ಕೂಡ ಆಯೋಗದ ಕ್ರಮವನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದಾರೆ.
ಚುನಾವಣಾ ಆಯೋಗವು ಜೂನ್ 24ರಂದು ಬಿಹಾರದಲ್ಲಿ ವಿಶೇಷ ಪರಿಶೀಲನೆ ಪ್ರಕ್ರಿಯೆ ಆರಂಭಿಸಲು ಸೂಚನೆ ನೀಡಿತ್ತು. ಈ ಆದೇಶವು ಸಂವಿಧಾನದ ಹಲವಾರು ವಿಧಿಗಳನ್ನು ಉಲ್ಲಂಘಿಸುತ್ತದೆ ಎಂದು ಅರ್ಜಿದಾರರು ವಾದಿಸಿದ್ದಾರೆ.
RJD ಸೇರಿದಂತೆ ಕೆಲವು ಪಕ್ಷಗಳು ಈ ನಿರ್ಧಾರಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಸುಪ್ರೀಂ ಕೋರ್ಟ್ ಮೆಟ್ಟಿಲೇರಿವೆ. ಅನರ್ಹ ಮತದಾರರನ್ನು ಪಟ್ಟಿಯಿಂದ ತೆಗೆದುಹಾಕಿ, ಅರ್ಹರನ್ನೇ ಸೇರಿಸುವ ಉದ್ದೇಶ ಈ ಪರಿಶೀಲನೆಯ ಹಿನ್ನಲೆಯಲ್ಲಿ ಇದೆ.
ಮತದಾರರು ತಮ್ಮ ದಾಖಲೆಗಳನ್ನು ಜುಲೈ 25ರೊಳಗೆ ಸಲ್ಲಿಸಲು ಸೂಚನೆ ನೀಡಲಾಗಿದೆ. ಈ ವರ್ಷ ಕೊನೆಗೆ ಬಿಹಾರದಲ್ಲಿ ಚುನಾವಣೆ ನಡೆಯಲಿದೆ.