
New Delhi: ಖ್ಯಾತ ಉದ್ಯಮಿ ಮತ್ತು ಮೈಕ್ರೋಸಾಫ್ಟ್ ಸಹ ಸಂಸ್ಥಾಪಕ ಬಿಲ್ ಗೇಟ್ಸ್ (Bill Gates) ಇಂದು ಭಾರತಕ್ಕೆ ಭೇಟಿ ನೀಡಿ ಪ್ರಧಾನಿ ನರೇಂದ್ರ ಮೋದಿ (PM Modi) ಮತ್ತು ವಿವಿಧ ಹಿರಿಯ ನಾಯಕರನ್ನು ಭೇಟಿಯಾದರು. ಈ ಸಂದರ್ಭ ತಂತ್ರಜ್ಞಾನ, ಆರೋಗ್ಯ ರಕ್ಷಣೆ, ಸುಸ್ಥಿರತೆ ಮತ್ತು ಭವಿಷ್ಯದ ಅಭಿವೃದ್ಧಿ ಕುರಿತಂತೆ ಚರ್ಚೆ ನಡೆಸಲಾಯಿತು.
ಬಿಲ್ ಗೇಟ್ಸ್ ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್ ನಲ್ಲಿ, “ಭಾರತದ ಅಭಿವೃದ್ಧಿ, ವಿಕಸಿತ್ ಭಾರತ್ @ 2047ರ ದೃಷ್ಟಿಕೋನ ಮತ್ತು ಆರೋಗ್ಯ, ಕೃಷಿ, ಎಐ (AI) ಸೇರಿದಂತೆ ಪ್ರಗತಿಯ ಬಗ್ಗೆ ಪ್ರಧಾನಿ ಮೋದಿ ಅವರೊಂದಿಗೆ ಉತ್ತಮ ಚರ್ಚೆ ನಡೆಸಿದೆ” ಎಂದು ಹೇಳಿದ್ದಾರೆ.
ಪ್ರಧಾನಿ ಮೋದಿ ಕೂಡ ಎಕ್ಸ್ ನಲ್ಲಿ, “ಬಿಲ್ ಗೇಟ್ಸ್ ಜೊತೆಗೆ ನಡೆಸಿದ ಸಭೆ ಅತ್ಯುತ್ತಮವಾಗಿತ್ತು. ತಂತ್ರಜ್ಞಾನ, ನಾವೀನ್ಯತೆ ಮತ್ತು ಸುಸ್ಥಿರತೆಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಚರ್ಚೆ ಮಾಡಿದ್ದೇವೆ” ಎಂದು ತಿಳಿಸಿದ್ದಾರೆ.
ಬಿಲ್ ಗೇಟ್ಸ್ ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ ಅವರನ್ನು ಭೇಟಿಯಾಗಿ ಭಾರತ ಸರ್ಕಾರ ಮತ್ತು ಬಿಲ್ & ಮೆಲಿಂಡಾ ಗೇಟ್ಸ್ ಫೌಂಡೇಶನ್ ನಡುವಿನ ಸಹಯೋಗ ಕುರಿತು ಚರ್ಚೆ ನಡೆಸಿದರು. “ಗುಣಮಟ್ಟದ ಆರೋಗ್ಯ ಸೇವೆ ಎಲ್ಲರಿಗೂ ಲಭ್ಯವಾಗಲು ಸಹಕಾರವನ್ನು ಮತ್ತಷ್ಟು ಬಲಪಡಿಸೋಣ” ಎಂದು ನಡ್ಡಾ ಹೇಳಿದ್ದಾರೆ.
ಈ ಭೇಟಿಯ ನಂತರ ಬಿಲ್ ಗೇಟ್ಸ್, ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರೊಂದಿಗೆ ಕೃತಕ ಬುದ್ಧಿಮತ್ತೆ (AI) ಮತ್ತು ಮುನ್ಸೂಚಕ ವಿಶ್ಲೇಷಣೆಯ ಬಳಕೆ ಕುರಿತು ಚರ್ಚಿಸಿದರು. “2047ರ ಸ್ವರ್ಣ ಆಂಧ್ರಪ್ರದೇಶದ ದೀರ್ಘಕಾಲೀನ ದೃಷ್ಟಿಕೋನವನ್ನು ಬೆಂಬಲಿಸುವಲ್ಲಿ ಗೇಟ್ಸ್ ಫೌಂಡೇಶನ್ ಮಹತ್ವದ ಪಾತ್ರ ವಹಿಸಿದೆ” ಎಂದು ಚಂದ್ರಬಾಬು ನಾಯ್ಡು ತಿಳಿಸಿದ್ದಾರೆ.