
ಬೆಳಗಾವಿ: ಉಗ್ರರ ದಾಳಿ ಬಿಜೆಪಿ ಆಡಳಿತದಲ್ಲೇ ಏಕೆ ನಡೆಯುತ್ತವೆ ಎಂಬ ಪ್ರಶ್ನೆ ಜನರಲ್ಲಿ ಮೂಡಿದೆ ಎಂದು ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ (Randeep Singh Surjewala) ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಂದಹಾರ್ ಪ್ರಕರಣದಿಂದ ಹಿಡಿದು ಪುಲ್ವಾಮಾ ದಾಳಿಯವರೆಗೆ. ಸುರ್ಜೇವಾಲಾ ಅವರು ಮಾಧ್ಯಮದೊಂದಿಗೆ ಮಾತನಾಡುತ್ತಾ, “ಐಸಿ 814 ವಿಮಾನ ಹೈಜಾಕ್ ಆಗಿ ಉಗ್ರ ಮೌಲಾನಾ ಮಸೂದ್ ಅಝರ್ ನನ್ನು ಬಿಡುಗಡೆ ಮಾಡಲಾಯಿತು. ಪಠಾಣ್ಕೋಟ್, ಉರಿ, ಪುಲ್ವಾಮಾ, ನಾಗೋಟಾ, ಅಮರನಾಥ ಯಾತ್ರೆ, ಇವೆಲ್ಲದರೂ ಉಗ್ರರು ದಾಳಿ ನಡೆಸಿದ್ದು ಬಿಜೆಪಿಯ ಆಡಳಿತದಲ್ಲೇ. ಮೋದಿ ಅವರು ಸಿನಿಮಾ ಚಿತ್ರೀಕರಣದಲ್ಲಿದ್ದಾಗ ಪುಲ್ವಾಮಾ ದಾಳಿ ನಡೆದಿದೆ” ಎಂದು ಕಿಡಿಕಾರಿದರು.
“ಪಾಕಿಸ್ತಾನಕ್ಕೆ ಆಹ್ವಾನವಿಲ್ಲದೇ ಹೋಗಿದ್ದು ಮೋದಿ ಮಾತ್ರ. ಅಲ್ಲಿ ಕೇಕ್ ಕತ್ತರಿಸಿ ಬಂದ ಬೆನ್ನಲ್ಲೇ ಪಠಾಣ್ಕೋಟ್ ದಾಳಿ ನಡೆದಿದೆ. ಇಂಟಲಿಜೆನ್ಸ್ ವೈಫಲ್ಯವಿದೆ. ಐಎಸ್ಐ ಅಧಿಕಾರಿಗಳನ್ನು ತನಿಖೆಗೆ ಆಹ್ವಾನಿಸುತ್ತಿರುವುದು ದೇಶದ ಭದ್ರತೆಗೆ ಅಪಮಾನ” ಎಂದರು.
BJP ಹಾಗೂ ISI ನಡುವಿನ ಸಂಬಂಧವಿರಬಹುದು ಎಂಬ ಶಂಕೆ ವ್ಯಕ್ತಪಡಿಸಿದ ಅವರು, ಬಜರಂಗದಳದ ಬಲರಾಮ್ ಸಿಂಗ್ ಮತ್ತು DRDO ದ ಪ್ರದೀಪ್ ISI ಪರ ಕಾರ್ಯ ನಿರ್ವಹಿಸಿದ್ದನ್ನು ಉದಾಹರಿಸಿದರು. ಜೊತೆಗೆ ಆಸೀಫಾ ಪ್ರಕರಣದ ರಾಜಕೀಯ ತಿರುವುಗಳನ್ನೂ ಪ್ರಶ್ನಿಸಿದರು.
“ಪಹಲ್ಗಾಮ್ ದಾಳಿ ಭದ್ರತಾ ವೈಫಲ್ಯ ಮತ್ತು ಎಚ್ಚರಿಕೆಯಾಗದ ಆಡಳಿತದ ಫಲ. ಕೇಂದ್ರಾಡಳಿತ ಪ್ರದೇಶದಲ್ಲಿ ಈ ಮಟ್ಟದ ದಾಳಿ ನಡೆಯುವುದು ಗಂಭೀರ ವಿಷಯ. ಸರ್ಕಾರ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು” ಎಂದು ಹೇಳಿದರು.
ಪಾಕಿಸ್ತಾನದ ವಿರುದ್ಧ ಕೇಂದ್ರ ಸರ್ಕಾರ ಕಠಿಣ ಕ್ರಮ ತೆಗೆದುಕೊಂಡರೆ ಕಾಂಗ್ರೆಸ್ ಸಂಪೂರ್ಣ ಬೆಂಬಲ ನೀಡುತ್ತದೆ ಎಂದು ಸುರ್ಜೇವಾಲಾ ಸ್ಪಷ್ಟಪಡಿಸಿದರು.