Amritsar (Punjab): 23 ಏಪ್ರಿಲ್ 2025ರಂದು ಪಂಜಾಬ್ ನ ಅಟ್ಟಾರಿ-ವಾಘಾ ಗಡಿ ಬಳಿ ಸೆರೆಯಾಗಿದ್ದ ಬಿಎಸ್ಎಫ್ ಯೋಧ ಪೂರ್ಣಂ ಕುಮಾರ್ ಶಾ ಅವರನ್ನು ಪಾಕಿಸ್ತಾನ (Pakistan) ಬುಧವಾರ (ಮೇ 14) ಭಾರತಕ್ಕೆ ಹಸ್ತಾಂತರಿಸಿದೆ. ಪಾಕಿಸ್ತಾನ ರೇಂಜರ್ಸ್ ಅವರು ಬೆಳಗ್ಗೆ 10:30ಕ್ಕೆ ಪೂರ್ಣಂ ಶಾವನ್ನು ಭಾರತದ ಗಡಿ ಭದ್ರತಾ ಪಡೆ (BSF)ಗೆ ಹಸ್ತಾಂತರಿಸಿದ್ದಾರೆ. ಈ ಹಸ್ತಾಂತರ ಪ್ರಕ್ರಿಯೆ ಶಾಂತಿಯುತವಾಗಿ ಮತ್ತು ಶಿಷ್ಟಾಚಾರಗಳ ಪ್ರಕಾರ ನಡೆದಿದೆ ಎಂದು ಬಿಎಸ್ಎಫ್ ವಕ್ತಾರರು ತಿಳಿಸಿದ್ದಾರೆ.
ಪಂಜಾಬ್ ಗಡಿ ಭದ್ರತಾ ಪಡೆಯು ಹೇಳಿದ ಪ್ರಕಾರ, “ಬಿಎಸ್ಎಫ್ ಕಾನ್ಸ್ಟೆಬಲ್ ಪೂರ್ಣಂ ಕುಮಾರ್ ಶಾ 23 ಏಪ್ರಿಲ್ 2025 ರಂದು ತಮ್ಮ ಕರ್ತವ್ಯ ಸಮಯದಲ್ಲಿ ಆಕಸ್ಮಿಕವಾಗಿ ಗಡಿ ದಾಟಿದ್ದರು. ನಂತರ ಅವರು ಪಾಕಿಸ್ತಾನ ರೇಂಜರ್ ಗಳ ವಶಕ್ಕೆ ಹೋಗಿದ್ದರು.”
ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯ ನಿವಾಸಿ ಪೂರ್ಣಂ ಶಾ ಅವರನ್ನು ಪಹಲ್ಗಾಮ್ ಭಯೋತ್ಪಾದಕ ದಾಳಿಯ ಎರಡನೇ ದಿನ 23 ಏಪ್ರಿಲ್ 2025 ರಂದು ಫಿರೋಜ್ಪುರ ಜಿಲ್ಲೆಯ ಭಾರತ-ಪಾಕಿಸ್ತಾನ ಅಂತಾರಾಷ್ಟ್ರೀಯ ಗಡಿಯಲ್ಲಿ ಪಾಕಿಸ್ತಾನ ರೇಂಜರ್ ಗಳು ಬಂಧಿಸಿದ್ದರು.
ಭಾರತ ಮತ್ತು ಪಾಕಿಸ್ತಾನ ಪರಸ್ಪರ ಮಿಲಿಟರಿ ಕಾರ್ಯಾಚರಣೆಗಳನ್ನು ನಿಲ್ಲಿಸಲು ಮೇ 10, 2025 ರಂದು ಒಪ್ಪಿಗೆಯಾದ ಕೆಲ ದಿನಗಳ ಬಳಿಕ ಈ ಹಸ್ತಾಂತರ ಪ್ರಕ್ರಿಯೆ ನಡೆಯಿತು.
ಪೂರ್ಣಂ ಶಾ ಅವರ ಕುಟುಂಬವು ಆತಂಕದಿಂದ ದಿನ ಕಳೆಯುತ್ತಿತ್ತು. ರಜನಿ, ಪೂರ್ಣಂ ಅವರ ಪತ್ನಿ, ಫಿರೋಜ್ಪುರದಲ್ಲಿ ಹಿರಿಯ ಬಿಎಸ್ಎಫ್ ಅಧಿಕಾರಿಗಳನ್ನು ಭೇಟಿಯಾಗಿ, ಸನ್ನಿವೇಶದ ಮಧ್ಯಪ್ರವೇಶವನ್ನು ಕೋರಿ, ಆತನ ಬಿಡುಗಡೆಗಾಗಿ ಪ್ರಯತ್ನಗಳನ್ನು ತೀವ್ರಗೊಳಿಸಿದ್ದರು.
ಬಿಎಸ್ಎಫ್ ಮೂಲ ಹೇಳಿಕೆ ಪ್ರಕಾರ, “ಪಾಕಿಸ್ತಾನ ರೇಂಜರ್ ಗಳೊಂದಿಗೆ ನಿಯಮಿತ ಧ್ವಜ ಸಭೆಗಳು ಮತ್ತು ಸಂಪರ್ಕಗಳ ನಂತರ, ಬಿಎಸ್ಎಫ್ ಕಠಿಣ ಪ್ರಯತ್ನಗಳಿಂದ ಪೂರ್ಣಂ ಶಾ ತಾಯ್ನಾಡಿಗೆ ವಾಪಸ್ ಬಂದಿದ್ದಾರೆ.”