Chikkaballapur: ಜುಲೈ 2ರಂದು ನಂದಿಗಿರಿಧಾಮದಲ್ಲಿ ನಡೆದ ರಾಜ್ಯ ಸರ್ಕಾರದ 14ನೇ ಸಚಿವ ಸಂಪುಟ ಸಭೆ (Cabinet meeting) ಚಿಕ್ಕಬಳ್ಳಾಪುರ ಜಿಲ್ಲೆಗೆ ನಿಜವಾದ ವರದಾನವಾಯಿತು. ಈ ಸಭೆಯಲ್ಲಿ ಜಿಲ್ಲೆಗೆ ಅನೇಕ ಮಹತ್ವದ ಯೋಜನೆಗಳು ಅನುಮೋದನೆಯಾಗಿವೆ.
141 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಹೈಟೆಕ್ ಹೂವಿನ ಮಾರುಕಟ್ಟೆ ನಿರ್ಮಾಣಕ್ಕೆ ಸರ್ಕಾರ ತೀರ್ಮಾನಿಸಿದೆ. ಇದರಿಂದ ಹೂ ಬೆಳೆದವರು ಖುಷಿಯಾಗಿದ್ದಾರೆ. ಈ ಮಾರುಕಟ್ಟೆ ಹಿಂದೆ ಖಾಸಗಿ-ಸರ್ಕಾರಿ ಸಹಭಾಗಿತ್ವದ ಮೂಲಕ ನಿರ್ಮಿಸಲು ಯೋಜನೆ ಇತ್ತಾದರೂ, ಶಾಸಕರ ಒತ್ತಾಯಕ್ಕೆ ಸ್ಪಂದಿಸಿ ಸರ್ಕಾರವೇ ನೇರವಾಗಿ ನಿರ್ಮಿಸಲು ಒಪ್ಪಿದೆ.
ಪ್ರಸಿದ್ಧ ಪ್ರವಾಸಿ ತಾಣ ನಂದಿಬೆಟ್ಟದ ಅಭಿವೃದ್ಧಿಗೆ 50 ಕೋಟಿ ರೂ. ಪ್ಯಾಕೇಜ್ ಘೋಷಿಸಲಾಗಿದೆ.
ಚಿಕ್ಕಬಳ್ಳಾಪುರ ವೈದ್ಯಕೀಯ ಕಾಲೇಜಿಗೆ 11 ಕೋಟಿ ವೆಚ್ಚದಲ್ಲಿ ಎಂಆರ್‌ಐ ಯಂತ್ರ ಖರೀದಿಗೆ ಅನುಮತಿ ನೀಡಲಾಗಿದೆ.
ಅಮರಾವತಿ ಸಮೀಪ ನಿರ್ಮಾಣವಾಗುತ್ತಿರುವ ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ 2ನೇ ಹಂತದ ಕಾಮಗಾರಿಗೆ 123 ಕೋಟಿ ರೂ. ಮಂಜೂರಾಗಿದೆ.
ಚಿಂತಾಮಣಿ ಮತ್ತು ಶಿಡ್ಲಘಟ್ಟದ 119 ಕೆರೆಗಳಿಗೆ 237 ಕೋಟಿ ರೂ. ವೆಚ್ಚದಲ್ಲಿ ಶುದ್ಧ ತ್ಯಾಜ್ಯ ನೀರು ಹರಿಸುವ ಯೋಜನೆಗೆ ಅನುಮತಿ ಸಿಕ್ಕಿದೆ. ಚಿಂತಾಮಣಿ ನಿವಾಸಿಗಳಿಗೆ ಕುಡಿಯುವ ನೀರು ಒದಗಿಸಲು ಭಕ್ತರಹಳ್ಳಿ–ಅರಸೀಕೆರೆ ಬಳಿ ಹೊಸ ಕೆರೆ ನಿರ್ಮಾಣಕ್ಕೆ 36 ಕೋಟಿ ರೂ. ಮಂಜೂರಾಗಿದೆ.
ಬಾಗೇಪಲ್ಲಿಯ ಗಂಟ್ಲಮಲ್ಲಮ್ಮ ಡ್ಯಾಂ ನಿರ್ಮಾಣಕ್ಕೆ 189 ಕೋಟಿ ರೂ. ನೀಡಲಾಗಿದ್ದು, ಇದರಿಂದ ರೈತರು ಸಂತೋಷ ವ್ಯಕ್ತಪಡಿಸಿದ್ದಾರೆ.
ಎತ್ತಿನಹೊಳೆ ಯೋಜನೆಯ ಇತರ ಹಂತಗಳು ಮತ್ತು ಎಚ್ ಎನ್ ವ್ಯಾಲಿ ತೃತೀಯ ಹಂತದ ನೀರು ಶುದ್ಧೀಕರಣ ಯೋಜನೆ ಅನುಮೋದನೆಯಿಲ್ಲದಿದ್ದರಿಂದ, ನೀರಾವರಿ ಹೋರಾಟಗಾರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.