Bengaluru: ರಾಜ್ಯ ಸರ್ಕಾರ ಜಾತಿ ಸಮೀಕ್ಷೆ ನಡೆಸುವ ಕೆಲಸವನ್ನು ಬೆಸ್ಕಾಂ (BESCOM) ಸಿಬ್ಬಂದಿಗೆ ಕೊಟ್ಟಿರುವುದರಿಂದ ರಾಜಧಾನಿ ಜನರಿಗೆ ಸಂಕಷ್ಟ ಎದುರಾಗಿದೆ. 2025ರ ಆಗಸ್ಟ್ 23ರಿಂದ ಮೀಟರ್ ರೀಡರ್ ಗಳಿಗೆ ಜಿಯೋ ಟ್ಯಾಗ್ ಹಾಗೂ ಸಮೀಕ್ಷೆ ಕೆಲಸ ನೀಡಲಾಗಿದೆ.
ಈ ಕಾರಣದಿಂದ ಮೀಟರ್ ರೀಡರ್ ಗಳು ಸರಿಯಾದ ಸಮಯಕ್ಕೆ ರೀಡಿಂಗ್ ತೆಗೆದು ಬಿಲ್ ಕೊಡುವುದಿಲ್ಲ ಎನ್ನುವ ಆರೋಪ ಕೇಳಿಬಂದಿದೆ. ಇದರಿಂದ ಎರಡು ತಿಂಗಳಿಂದ ವಿದ್ಯುತ್ ಬಿಲ್ ದಿಢೀರ್ ಏರಿಕೆಯಾಗಿ ಜನರು ಸಂಕಷ್ಟದಲ್ಲಿದ್ದಾರೆ.
ಹಿಂದೆ 11 ಅಥವಾ 12ನೇ ತಾರೀಖಿಗೆ ಬಿಲ್ ಕೊಡುತ್ತಿದ್ದ ಸಿಬ್ಬಂದಿ ಈಗ ವಿಳಂಬ ಮಾಡುತ್ತಿದ್ದಾರೆ. ಇದರಿಂದ ವಿದ್ಯುತ್ ಬಿಲ್ ಹೆಚ್ಚಾಗಿದೆ ಎಂದು ಗ್ರಾಹಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸರ್ಕಾರದ ಗೃಹಜ್ಯೋತಿ ಯೋಜನೆಯಡಿಯಲ್ಲಿ ಉಚಿತ ಕರೆಂಟ್ ಪಡೆಯುತ್ತಿದ್ದವರಿಗೂ ಕಳೆದ ಎರಡು ತಿಂಗಳಲ್ಲಿ ನೂರಾರು ರೂಪಾಯಿ ಬಿಲ್ ಬಂದಿದೆ. ಉಚಿತ ಯೂನಿಟ್ ಮೀರಿದ ಬಳಿಕ ಹೆಚ್ಚುವರಿ ಶುಲ್ಕ ಸೇರಿಸಿ ಬಿಲ್ ನೀಡಲಾಗುತ್ತಿದೆ ಎಂದು ಆರೋಪಿಸಲಾಗಿದೆ.
ಸರ್ಕಾರ ಮೀಟರ್ ರೀಡರ್ ಗಳಿಗೆ ಜಾತಿ ಸಮೀಕ್ಷೆಯ ಕೆಲಸ ಕೊಟ್ಟು ಒತ್ತಡ ಹಾಕಿದ ಪರಿಣಾಮ, ಉಚಿತ ವಿದ್ಯುತ್ ಸೌಲಭ್ಯಕ್ಕೂ ಕಡಿತ ಮಾಡಿದೆ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸರ್ಕಾರ ಇದೀಗ ಜನರ ಸಮಸ್ಯೆಗೆ ಯಾವ ಪರಿಹಾರ ಕೊಡುತ್ತದೆ ಎಂಬುದು ಕಾದುನೋಡಬೇಕಾಗಿದೆ.







