IPL 2025 ಮುಗಿದು ಮೂರು ತಿಂಗಳು ಕಳೆದಿವೆ. ಇನ್ನೂ 7–8 ತಿಂಗಳು ಬಾಕಿ ಇರುವಾಗಲೇ ರಾಜಸ್ಥಾನ ರಾಯಲ್ಸ್ (Rajasthan Royals) ತಂಡ ಹೊಸ ನಾಯಕನ ನೇಮಕದ ಬಗ್ಗೆ ಚರ್ಚೆ ಶುರುವಾಗಿದೆ.
ಕೆಲವು ದಿನಗಳಿಂದ ಸಂಜು ಸ್ಯಾಮ್ಸನ್ ರಾಜಸ್ಥಾನ ರಾಯಲ್ಸ್ ತಂಡದಿಂದ ಹೊರಬರುತ್ತಾರೆ ಎಂಬ ಸುದ್ದಿ ಕ್ರಿಕೆಟ್ ವಲಯದಲ್ಲಿ ಹರಿದಾಡುತ್ತಿದೆ.
ವರದಿಗಳ ಪ್ರಕಾರ, ಅವರು ಈಗಾಗಲೇ ತಂಡದ ಆಡಳಿತ ಮಂಡಳಿಗೆ ತಾವು ಬಿಡುಗಡೆಗೊಳ್ಳಲು ಬಯಸುತ್ತಿರುವುದಾಗಿ ತಿಳಿಸಿದ್ದಾರೆ. ಇದರಿಂದ ಫ್ರಾಂಚೈಸಿ ಹೊಸ ನಾಯಕನ ಹುಡುಕಾಟ ಆರಂಭಿಸಿದೆ.
ಟೀಮ್ ಇಂಡಿಯಾ ವಿಕೆಟ್ ಕೀಪರ್ ಧ್ರುವ್ ಜುರೇಲ್ ದುಲೀಪ್ ಟ್ರೋಫಿಯಲ್ಲಿ ಸೆಂಟ್ರಲ್ ಝೋನ್ ತಂಡದ ನಾಯಕನಾಗಿ ಆಯ್ಕೆಯಾಗಿದ್ದಾರೆ. ರಾಜಸ್ಥಾನ ರಾಯಲ್ಸ್ ತಮ್ಮ X ಖಾತೆಯಲ್ಲಿ ಅವರ ಫೋಟೋ ಹಂಚಿ “ಕ್ಯಾಪ್ಟನ್ ಜುರೇಲ್” ಎಂದು ಬರೆದಿದೆ. ಈ ಪೋಸ್ಟ್‌ನಿಂದ, ಜುರೇಲ್ ಮುಂದಿನ ರಾಜಸ್ಥಾನ ನಾಯಕನಾಗಬಹುದು ಎಂಬ ಊಹೆಗಳು ಶುರುವಾಗಿದೆ.
ಸಂಜು ಸ್ಯಾಮ್ಸನ್ ಹೊರಬರುವ ಸುದ್ದಿ ನಡುವೆ, ಜುರೇಲ್ ಫೋಟೋ ಹಂಚಿಕೊಂಡಿರುವುದು ಫ್ಯಾನ್ಸ್ ನಡುವೆ ಚರ್ಚೆಗೆ ಕಾರಣವಾಗಿದೆ. ಯಶಸ್ವಿ ಜೈಸ್ವಾಲ್ ಮತ್ತು ರಿಯಾನ್ ಪರಾಗ್ ಇದ್ದಾಗಲೇ ಜುರೇಲ್‌ಗೆ ನಾಯಕತ್ವ ಸಿಗುತ್ತದೆಯೇ ಎಂಬ ಪ್ರಶ್ನೆಯೂ ಕೇಳಿಬರುತ್ತಿದೆ.
ಸಂಜು ಸ್ಯಾಮ್ಸನ್ ತಂಡ ತೊರೆಯಲು ಕಾರಣ
- ಕಳೆದ ನಾಲ್ಕು ವರ್ಷಗಳಿಂದ ರಾಜಸ್ಥಾನ ತಂಡದ ನಾಯಕನಾಗಿದ್ದ ಸಂಜು, ಕಳೆದ ಋತುವಿನಲ್ಲಿ ನಿರೀಕ್ಷಿತ ಪ್ರದರ್ಶನ ಕೊಡಲಿಲ್ಲ.
- ಕೋಚ್ ರಾಹುಲ್ ದ್ರಾವಿಡ್ ಹಾಗೂ ನಿರ್ವಹಣೆಯೊಂದಿಗೆ ಭಿನ್ನಾಭಿಪ್ರಾಯಗಳಿದ್ದವು ಎಂದು ವರದಿಯಾಗಿದೆ.
- 2025 ಮೆಗಾ ಹರಾಜಿಗೆ ಮುನ್ನ ರಾಜಸ್ಥಾನ ರಾಯಲ್ಸ್ ಅವರು 18 ಕೋಟಿ ರೂ.ಗೆ ಉಳಿಸಿಕೊಂಡಿದ್ದರು.
ಚೆನ್ನೈ ಸೂಪರ್ ಕಿಂಗ್ಸ್ ಸಂಜು ಅವರನ್ನು ತನ್ನ ತಂಡಕ್ಕೆ ಸೇರಿಸಿಕೊಳ್ಳಲು ಆಸಕ್ತಿ ತೋರಿದೆ. CSK, ಧೋನಿ ನಂತರದ ಶಾಶ್ವತ ನಾಯಕನಿಗಾಗಿ ಹುಡುಕಾಟದಲ್ಲಿದ್ದು, ಸಂಜು ಅಥವಾ ಕೆಎಲ್ ರಾಹುಲ್ ಅವರಲ್ಲಿ ಒಬ್ಬರನ್ನು ಆಯ್ಕೆಮಾಡಬಹುದು ಎಂಬ ವರದಿ ಇದೆ.
ಸಂಜು ಅವರನ್ನು ಪಡೆಯಲು, ರಾಜಸ್ಥಾನ ಇಬ್ಬರು ಆಟಗಾರರನ್ನು ವಿನಿಮಯವಾಗಿ ಕೇಳುವ ಸಾಧ್ಯತೆ ಇದೆ.