Channapatna: ಚನ್ನಪಟ್ಟಣ ಉಪಚುನಾವಣೆ (Channapatna By-Election) ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ಈಗಾಗಲೇ ರಾಜೀನಾಮೆ ನೀಡಿರುವ ಬಿಜೆಪಿ ನಾಯಕ ಸಿಪಿ ಯೋಗೇಶ್ವರ್ (CP Yogeshwar) ಚುನಾವಣೆಯಲ್ಲಿ ಸ್ಪರ್ಧಿಸುವುದು ಖಚಿತ ಎಂದು ಹೇಳುತ್ತಿದ್ದಾರೆ.
ಈ ಮಧ್ಯೆ, ಕಾಂಗ್ರೆಸ್ (Congress) ಸೇರ್ಪಡೆಯಾಗುತ್ತಾರಾ ಎನ್ನುವ ಪ್ರಶ್ನೆಗಳು ಎದ್ದಿವೇ, ಈ ಸಂಬಂಧ ಅವರು ಇಂದು ಕಾರ್ಯಕರ್ತರು, ಪ್ರಮುಖ ಮುಖಂಡರ ಗೌಪ್ಯ ಸಭೆ ನಡೆಸಲು ನಿರ್ಧರಿಸಿದ್ದಾರೆ. ಅಪ್ತರ ಮೂಲಕ ಪ್ರಮುಖ ಮುಖಂಡರಿಗೆ ದೂರವಾಣಿ ಕರೆ ಮಾಡಿ ಸಭೆಯ ಮಾಹಿತಿ ತಿಳಿಸದಂತೆ ಸೂಚನೆಯನ್ನೂ ನೀಡಿದ್ದಾರೆ.
ನಿನ್ನೆಯಷ್ಟೇ ಯೋಗೇಶ್ವರ್ ಅವರು ಎಂಎಲ್ಸಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಆಕ್ಷಣದಿಂದಲೇ ಕಾಂಗ್ರೆಸ್ನಲ್ಲಿ ಚರ್ಚೆಗಳು ಆರಂಭವಾಗಿವೆ. ಈಗಾಗಲೇ ಸಿಪಿ ಯೋಗೇಶ್ವರ್ ಅವರಿಗೆ ಕಾಂಗ್ರೆಸ್ ಆಫರ್ ಕೂಡ ನೀಡಿದೆ ಎಂದು ಹೇಳಲಾಗುತ್ತಿದೆ.
ಆದರೆ ಈ ಬಗ್ಗೆ ಸಿಪಿವೈ ಬಹಿರಂಗಪಡಿಸಿಲ್ಲ, ಆದರೆ ಭವಿಷ್ಯದ ದೃಷ್ಟಿಯಿಂದ ಏನು ನಿರ್ಧಾರ ತೆಗೆದುಕೊಳ್ಳಬೇಕು ಎನ್ನುವುದನ್ನು ನಮ್ಮ ಕಾರ್ಯಕರ್ತರ ಜೊತೆ ಮಾತನಾಡಿ ನಿರ್ಧಾರ ತೆಗೆದುಕೊಳ್ಳುತ್ತೇನೆ ಎಂದು ಹೇಳಿದ್ದಾರೆ.
ಚನ್ನಪಟ್ಟಣ ಕ್ಷೇತ್ರದಲ್ಲಿ ದಳಪತಿ ಕುಮಾರಸ್ವಾಮಿಯವರಿಗೆ ಟಕ್ಕರ್ ಕೊಡಲೇಬೇಕೆಂದು ನಿರ್ಧರಿಸಿರುವ ಕಾಂಗ್ರೆಸ್ ಶತಾಯಗತಾಯ ಗೆಲ್ಲಲೇಬೇಕೆಂದು ಪಣ ತೊಟ್ಟಿದ್ದಾರೆ.
ಇನ್ನೊಂದೆಡೆ ಸಿಪಿ ಯೋಗೇಶ್ವರ್ ಅವರನ್ನು ಪಕ್ಷಕ್ಕೆ ಕರೆತಂದು ಟಿಕೆಟ್ ಕೊಟ್ಟರೆ ಗೆಲುವು ಸುಲಭ ಹಾಗೂ ಹಳೇ ಮೈಸೂರು ಭಾಗದಲ್ಲಿ ಬಿಜೆಪಿ ಜೆಡಿಎಸ್ ಪ್ರಾಬಲ್ಯ ಮುರಿಯಬಹುದು ಎಂದು ಯೋಜನೆ ರೂಪಿಸಿದ್ದಾರೆ ಎನ್ನಲಾಗಿದೆ.
ಈ ನಡುವೆ ಸಿಪಿ ಯೋಗೇಶ್ವರ್ ಅವರನ್ನು ಪಕ್ಷಕ್ಕೆ ಕರೆತರಲು ಸಿಎಂ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಕೂಡ ಅನುಮತಿ ನೀಡಿದ್ದಾರೆ ಎನ್ನಲಾಗಿದೆ.
ಸಿಪಿ ಯೋಗೇಶ್ವರ್ ಜೊತೆ ಸಂಪರ್ಕದಲ್ಲಿರುವ ಮಾಗಡಿ ಶಾಸಕ ಬಾಲಕೃಷ್ಣ ಅವರು ಯೋಗೇಶ್ವರ್ ಜೊತೆ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.
ಇದಕ್ಕೆ ಸಕಾರಾತ್ಮಕವಾಗಿ ಪ್ರತಿಕ್ರಿಯೆ ನೀಡಿರುವ ಸಿಪಿ ಯೋಗೇಶ್ವರ್ ಸಮಯ ಬೇಕು ಎಂದು ಹೇಳಿದ್ದಾರೆ ಎನ್ನಲಾಗಿದೆ. ಎಲ್ಲವೂ ಅಂದುಕೊಂಡಂತೆ ಆದರೆ ಅಕ್ಟೋಬರ್ 23ರ ಬುಧವಾರ ಸಿಪಿ ಯೋಗೇಶ್ವರ್ ಕಾಂಗ್ರೆಸ್ ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.