Malur, Kolar : ಮಾಲೂರು ತಾಲೂಕ್ಕಿನ ಐತಿಹಾಸಿಕ ಪ್ರಸಿದ್ಧ ಚಿಕ್ಕತಿರುಪತಿಯ ಪ್ರಸನ್ನ ವೆಂಕಟರಮಣಸ್ವಾಮಿ ಬ್ರಹ್ಮರಥೋತ್ಸವವು (Chikka Tirupati Prasanna Venkateshwaraswamy Brahma Rathotsava) ಬುಧವಾರ ವಿಜೃಂಭಣೆಯಿಂದ ನಡೆಯಿತು. ಮಧ್ಯಾಹ್ನ 11.50ಕ್ಕೆ ದೇವಾಲಯದ ಪ್ರಧಾನ ಅರ್ಚಕ ರವಿ ದೀಕ್ಷಿತ್ ಅವರ ನೇತೃತ್ವದಲ್ಲಿ ಧಾರ್ಮಿಕ ವಿಧಿ–ವಿಧಾನಗಳೊಂದಿಗೆ ಮಂಗಳಾರತಿಯ ಬಳಿಕ ಸಂಸದ ಎಸ್.ಮುನಿಸ್ವಾಮಿ, ಶಾಸಕ ಕೆ.ವೈ. ನಂಜೇಗೌಡ ತಹಶೀಲ್ದಾರ್ ರಮೇಶ್ ರಥೋತ್ಸವಕ್ಕೆ ಚಾಲನೆ ನೀಡಿದರು. ಅಪಾರ ಸಂಖ್ಯೆಯಲ್ಲಿ ನೆರೆದಿದ್ದ ಭಕ್ತರು ‘ಗೋವಿಂದ’ ನಾಮಸ್ಮರಣೆಯೊಂದಿಗೆ ಎಳೆದರು.
ಬಣ್ಣ–ಬಣ್ಣದ ಬಟ್ಟೆಗಳಿಂದ, ತಳಿರು ತೋರಣಗಳಿಂದ ಅಲಂಕರಿಸಲಾಗಿದ್ದ ಸುಮಾರು 75 ಅಡಿ ಎತ್ತರದ ರಥದಲ್ಲಿ ಶ್ರೀದೇವಿ–ಭೂದೇವಿ ಸಮೇತ ಶ್ರೀಸ್ವಾಮಿಯನ್ನು ಕುಳ್ಳರಿಸಿ ಹೂವಿನಿಂದ ಅಲಂಕರಿಸಲಾಗಿತ್ತು. ರಥ ಸಾಗುವ ಮಾರ್ಗದ ಎರಡು ಬದಿಯಲ್ಲಿ ನೆರೆದಿದ್ದ ಭಕ್ತರು ರಥಕ್ಕೆ ಬಾಳೆಹಣ್ಣು, ದವನ ಸೇರಿದಂತೆ ಚಿಲ್ಲರೆ ನಾಣ್ಯಗಳನ್ನು ಎಸೆದು ಹರಕೆ ತೀರಿಸಿಕೊಂಡರು.
ರಾಜ್ಯ ಪ್ರಕೋಷ್ಠ ಸದಸ್ಯ ಹೂಡಿ ವಿಜಯಕುಮಾರ್, ಆರ್. ಪ್ರಭಾಕರ್, ಹರೀಶ್, ಭಾನುತೇಜ, ಜೆಡಿಎಸ್ ಮುಖಂಡರಾದ ಜಿ.ಇ. ರಾಮೇಗೌಡ, ದಿನೇಶ್ ಗೌಡ, ಗುಡ್ನಹಳ್ಳಿ ಮಂಜುನಾಥ್ ಗೌಡ ನಂದನ್ ಗೌಡ, ವೆಂಕಟೇಶ್ ಗೌಡ, ಶಶಿಕುಮಾರ್ ಉಪಸ್ಥಿತರಿದ್ದರು .