Chikkaballapur : ಚಿಕ್ಕಬಳ್ಳಾಪುರ ಜಿಲ್ಲಾ ಕ್ರೀಡಾಂಗಣದಲ್ಲಿ ನ.30ರಂದು ಜಿಲ್ಲಾ ಮಟ್ಟದ ಯುವಜನೋತ್ಸವವನ್ನು ಆಯೋಜಿಸಲಾಗಿದೆ. 15 ವರ್ಷ ಮೇಲ್ಪಟ್ಟ ಜಿಲ್ಲೆಯ ಎಲ್ಲ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ಸ್ಪರ್ಧೆಗಳಲ್ಲಿ ಭಾಗವಹಿಸಬೇಕೆಂದು ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ ಹೇಳಿದರು.
ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಪೂರ್ವಸಿದ್ಧತಾ ಸಭೆಯಲ್ಲಿ ಅವರು ಮಾತನಾಡಿದರು. ಯುವಜನರಲ್ಲಿ ದೇಶಭಕ್ತಿ, ಸ್ವಾತಂತ್ರ್ಯ ಹೋರಾಟದ ಮೌಲ್ಯಗಳಿಗೆ ಅರಿವು ಮೂಡಿಸಲು ಈ ಉತ್ಸವವನ್ನು ಹಮ್ಮಿಕೊಳ್ಳಲಾಗಿದೆ. 15-29 ವರ್ಷ ವಯೋಮಿತಿ ಹೊಂದಿರುವ ಯುವಜನರ ಪ್ರತಿಭೆ ಪ್ರದರ್ಶನಕ್ಕೆ ‘ಯುವಶಕ್ತಿ ಸೇ ಜನ ಭಾಗಿದಾರಿ’ ಎಂಬ ಶೀರ್ಷಿಕೆಯಡಿ ಉತ್ಸವವನ್ನು ಜಿಲ್ಲಾ, ರಾಜ್ಯ, ರಾಷ್ಟ್ರ ಮಟ್ಟಗಳಲ್ಲಿ ಆಯೋಜಿಸಲಾಗುತ್ತಿದೆ.
ನ.30ರಂದು ಬೆಳಿಗ್ಗೆ 10.30ಕ್ಕೆ ಸರ್ ಎಂ.ವಿ ಕ್ರೀಡಾಂಗಣದಲ್ಲಿ ವಿಜ್ಞಾನ ಮೇಳ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳನ್ನು ನಡೆಸಲಾಗುತ್ತದೆ. ವಿಜೇತರಿಗೆ ನಗದು ಬಹುಮಾನ ನೀಡಲಾಗುವುದು ಮತ್ತು ರಾಜ್ಯ, ರಾಷ್ಟ್ರ ಮಟ್ಟಕ್ಕೆ ಆಯ್ಕೆ ಮಾಡಲಾಗುತ್ತದೆ.
ಸ್ಪರ್ಧೆಗಳಲ್ಲಿ ಭಾಗವಹಿಸಲು ಜಿಲ್ಲೆಯ ವಿದ್ಯಾರ್ಥಿಗಳು ವಾಸಸ್ಥಳ ದೃಢೀಕರಣ ಪತ್ರ, ಆಧಾರ್ ಕಾರ್ಡ್, ಶಾಲಾ ಅಂಕಪಟ್ಟಿ ಅಥವಾ ಮತದಾರರ ಗುರುತಿನ ಚೀಟಿಯನ್ನು ತರಬೇಕು. ಸ್ಪರ್ಧೆಗಳಲ್ಲಿ ಯುವಕ-ಯುವತಿಯರಿಗಾಗಿ ಪ್ರತ್ಯೇಕ ವಿಭಾಗಗಳಿಲ್ಲ. ಆದರೆ, ಸ್ಪರ್ಧಿಗಳು ಜಿಲ್ಲೆಗೆ ಮಾತ್ರವೇ ಪ್ರತಿನಿಧಿಸಬೇಕು; ಒಂದು ಜಿಲ್ಲೆಯಿಂದ ಮತ್ತೊಂದಕ್ಕೆ ಹೋಗಿ ಸ್ಪರ್ಧಿಸುವಂತಿಲ್ಲ. ಪಕ್ಕವಾದ್ಯ, ವೇಷಭೂಷಣ, ರಂಗಸಜ್ಜಿಕೆ ಮುಂತಾದ ಸ್ಪರ್ಧೆಗಳಿಗೆ ಬೇಕಾದ ಉಪಕರಣಗಳನ್ನು ಸ್ಪರ್ಧಿಗಳೇ ತರುತ್ತಾರೆ.
ಸಮಾರಂಭವನ್ನು ಯಶಸ್ವಿಯಾಗಿ ನೆರವೇರಿಸಲು ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ಸಹಕರಿಸಬೇಕು ಎಂದು ಸೂಚಿಸಲಾಗಿದೆ. ಸಭೆಯಲ್ಲಿ ಜಿಲ್ಲಾ ಪಂಚಾಯತಿ ಯೋಜನಾ ನಿರ್ದೇಶಕ ಈಶ್ವರಪ್ಪ, ಆರೋಗ್ಯಾಧಿಕಾರಿ ಡಾ.ಎಸ್.ಎಸ್. ಮಹೇಶ್ ಕುಮಾರ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಉಪನಿರ್ದೇಶಕ ವೆಂಕಟೇಶ ರೆಡ್ಡಿ, ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಜಗದೀಶ್ ಮತ್ತು ಯುವಜನಾಧಿಕಾರಿ ಕೆ.ರಾಜೇಶ್ ಕಾರಂತ್ ಉಪಸ್ಥಿತರಿದ್ದರು.
For Daily Updates WhatsApp ‘HI’ to 7406303366
The post ಚಿಕ್ಕಬಳ್ಳಾಪುರದಲ್ಲಿ ನ.30 ರಂದು ಜಿಲ್ಲಾ ಮಟ್ಟದ ಯುವಜನೋತ್ಸವ appeared first on Chikkaballapur | Chikballapur | Chikkaballapura Latest Breaking New Stories | ಚಿಕ್ಕಬಳ್ಳಾಪುರ ಸುದ್ದಿ.