Chikkaballapur : ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯದ ‘ಉದ್ಯೋಗ ಖಾತರಿ ನಡಿಗೆ ಸಬಲತೆಯಡೆಗೆ’ ಅಭಿಯಾನದಡಿ ಗ್ರಾಮಸಭೆ ನಡೆಸಿ ನರೇಗಾ (NREGA) ಯೋಜನೆಯ 2025–26ನೇ ಸಾಲಿನ ಕ್ರಿಯಾ ಯೋಜನೆ ತಯಾರಿಸಲು ನಿರ್ದೇಶನ ನೀಡಿದೆ.
ಈ ಯೋಜನೆ ಪ್ರಕ್ರಿಯೆಗಾಗಿನ ಅವಧಿಯನ್ನು ವಿಸ್ತರಿಸಬೇಕು ಎಂಬ ಬೇಡಿಕೆಯನ್ನು ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಜಿಲ್ಲಾ ಘಟಕದ ಸದಸ್ಯರು ಗುರುವಾರ ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಪ್ರಕಾಶ್ ಜಿ.ಟಿ. ನಿಟ್ಟಾಲಿ ಅವರಿಗೆ ಮನವಿ ಸಲ್ಲಿಸಿದರು.
ನರೇಗಾ ಯೋಜನೆಯ ಹೊಸ ಕಾರ್ಮಿಕ ಆಯವ್ಯಯ ತಯಾರಿಗಾಗಿ 2024ರ ಅ. 2ರಿಂದ ಒಂದು ತಿಂಗಳು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ‘ಉದ್ಯೋಗ ಖಾತರಿ ನಡಿಗೆ ಸಬಲತೆಯಡೆಗೆ’ ಅಭಿಯಾನ ಕೈಗೊಳ್ಳಲು ಸಲಹೆ ನೀಡಲಾಗಿದೆ. ವಾರ್ಡ್ ಸಭೆಗಳನ್ನು 2024ರ ನ. 15ರೊಳಗೆ ಮತ್ತು ಗ್ರಾಮಸಭೆಗಳನ್ನು ನ. 30ರ ಒಳಗೆ ನಡೆಸಬೇಕಾಗಿದೆ.
ಆದರೆ, ಯೋಜನೆಗೆ ಸಂಬಂಧಿಸಿದ ಅಧಿಕಾರಿಗಳ ನಿರ್ಲಕ್ಷ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿದ ಸಂಘದ ಸದಸ್ಯರು, “ಕ್ರಿಯಾ ಯೋಜನೆಯ ಗಡುವನ್ನು ಕನಿಷ್ಠ ಡಿ. 30ರವರೆಗೆ ವಿಸ್ತರಿಸಬೇಕು. ಇದರಿಂದ ಬಡವರು, ಕೂಲಿ ಕಾರ್ಮಿಕರು, ರೈತರು, ದಲಿತರು, ಮತ್ತು ಮಹಿಳಾ ಕೂಲಿ ಕಾರ್ಮಿಕರಿಗೆ ಯೋಜನೆಯ ಪ್ರಯೋಜನಗಳು ಸುಲಭವಾಗಿ ಲಭಿಸಬಹುದು” ಎಂದು ಮನವಿಯಲ್ಲಿ ಕೋರಿದ್ದಾರೆ.
ಈ ಸಂದರ್ಭದಲ್ಲಿ ಸಂಘದ ಪ್ರಮುಖರಾದ ಕೆ. ನಾಗರಾಜು, ಈಶ್ವರಪ್ಪ, ಗಂಗರಾಜು, ಎಂ.ಪಿ. ಮುನಿವೆಂಕಟಪ್ಪ, ಚನ್ನರಾಯಪ್ಪ, ರಘುರಾಮರೆಡ್ಡಿ, ಶ್ರೀನಿವಾಸ್, ಮತ್ತು ಬಿ.ಎನ್. ಮುನಿಕೃಷ್ಣಪ್ಪ ಉಪಸ್ಥಿತರಿದ್ದರು.
For Daily Updates WhatsApp ‘HI’ to 7406303366
The post NREGA ಯೋಜನೆ ಕ್ರಿಯಾ ಯೋಜನೆ: ಗಡುವು ವಿಸ್ತರಣೆ ಕೇಳಿದ ಕಾರ್ಮಿಕ ಸಂಘಟನೆ appeared first on Chikkaballapur | Chikballapur | Chikkaballapura Latest Breaking New Stories | ಚಿಕ್ಕಬಳ್ಳಾಪುರ ಸುದ್ದಿ.