![Chikkamagaluru forest fire Chikkamagaluru forest fire](https://kannadatopnews.com/wp-content/uploads/2025/02/Photoshop_Online-news-copy-71.jpg)
Chikkamagaluru: ಪಶ್ಚಿಮ ಘಟ್ಟಗಳ ಅರಣ್ಯದಲ್ಲಿ ಕಂಡುಬಂದ ಬೆಂಕಿ ಹಿಂದೆ ಕಿಡಿಗೇಡಿಗಳ ಕೈವಾಡವಿದೆ ಎಂಬುದು ತನಿಖೆಯಲ್ಲಿ ಬಹಿರಂಗವಾಗಿದೆ. ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟಿಯ ಬಿದಿರುತಳ ಅರಣ್ಯದಲ್ಲಿ ಕಳೆದ ವಾರ ಈ ಅಗ್ನಿ ಅವಘಡ ಸಂಭವಿಸಿತ್ತು. ಬೆಂಕಿಯ ಪರಿಣಾಮ, 500 ಎಕರೆಗಿಂತಲೂ ಹೆಚ್ಚು ಪ್ರದೇಶದ ಅಪಾರ ಸಸ್ಯ ಸಂಪತ್ತು ನಾಶವಾಗಿತ್ತು.
ಅರಣ್ಯ ಇಲಾಖೆ ಅಧಿಕಾರಿಗಳ ಪ್ರಾಥಮಿಕ ತನಿಖೆಯಿಂದ ರಾತ್ರಿ ಶಿಕಾರಿಗೆ ತೆರಳಿದ ಕಿಡಿಗೇಡಿಗಳೇ ಬೆಂಕಿ ಹಚ್ಚಿರುವುದು ದೃಢಪಟ್ಟಿದೆ. ಈ ಸಂಬಂಧ ಕರ್ನಾಟಕ ಅರಣ್ಯ ಕಾಯ್ದೆ 24 (ಎ2ಜಿ) ಅಡಿಯಲ್ಲಿ ಮೂಡಿಗೆರೆ ವಲಯ ಅರಣ್ಯ ಇಲಾಖೆಯಲ್ಲಿ ಎಫ್ಐಆರ್ ದಾಖಲಾಗಿದೆ. ಆರೋಪಿಗಳನ್ನು ಪತ್ತೆಹಚ್ಚಲು ವಿಶೇಷ ತಂಡ ರಚನೆಗೊಂಡಿದ್ದು, ಕಾರ್ಯಾಚರಣೆ ಮುಂದುವರೆದಿದೆ.
ಜನವರಿ ತಿಂಗಳಲ್ಲಿ ಎರಡು ಬಾರಿ ಚಾರ್ಮಾಡಿ ಅರಣ್ಯದಲ್ಲಿ ಭಾರೀ ಬೆಂಕಿ ಅವಘಡ ಸಂಭವಿಸಿತ್ತು. ಜನವರಿ 20ರಂದು ಸಂಭವಿಸಿದ ಬೆಂಕಿಯಿಂದ ನೂರಾರು ಎಕರೆ ಅರಣ್ಯ ಮತ್ತು ಅಲ್ಲಿ ವಾಸಿಸುತ್ತಿದ್ದ ಪ್ರಾಣಿಗಳು ಸುಟ್ಟು ಹೋಗಿದ್ದವು. ಅದಾದ ಕೆಲವೇ ದಿನಗಳಲ್ಲಿ, ಜನವರಿ 25ರಂದು ಚಾರ್ಮಾಡಿ ಘಾಟಿಯ ಸುಬ್ರಮಣ್ಯ ದೇವಸ್ಥಾನದ ಬಳಿಯೂ ಮತ್ತೆ ಬೆಂಕಿ ಕಾಣಿಸಿಕೊಂಡಿತ್ತು. ಈ ವೇಳೆ ಬೆಂಕಿ 10 ಕಿಮೀ ವ್ಯಾಪ್ತಿಗೆ ಹರಡಿತ್ತು. ಅಗ್ನಿಶಾಮಕ ದಳ ಮತ್ತು ಅರಣ್ಯ ಇಲಾಖೆ ಸಿಬ್ಬಂದಿಯು ಹೊತ್ತಿಕೊಂಡಿದ್ದ ಬೆಂಕಿ ನಂದಿಸಲು ಹರಸಾಹಸ ಪಟ್ಟರು.
ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ಅರಣ್ಯ ಸಚಿವ ಈಶ್ವರ್ ಖಂಡ್ರೆ, ತಕ್ಷಣವೇ ಅಧಿಕಾರಿಗಳ ಸಭೆ ನಡೆಸಿ, ಭವಿಷ್ಯದಲ್ಲಿ ಈ ರೀತಿಯ ಘಟನೆಗಳು ಪುನರಾವೃತವಾಗದಂತೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು.
ಕಡೂರು ತಾಲೂಕಿನ ನಾಗಗೊಂಡನಹಳ್ಳಿ ಗ್ರಾಮದಲ್ಲಿ ಪುಟ್ಟಮ್ಮ ಎಂಬುವವರ ತೋಟದಲ್ಲಿಯೂ ಬೆಂಕಿ ಹತ್ತಿಕೊಂಡ ಪರಿಣಾಮ, 35ಕ್ಕೂ ಹೆಚ್ಚು ಶ್ರೀಗಂಧದ ಮರಗಳು, ಬಾಳೆ, ಅಡಕೆ ಗಿಡಗಳು ಮತ್ತು 180ಕ್ಕೂ ಹೆಚ್ಚು ರಾಗಿ ಹುಲ್ಲಿನ ಬಣವೆಗಳು ಸುಟ್ಟು ಭಸ್ಮವಾಗಿವೆ. ಈ ಬೆಂಕಿ ಕುರಿಗಾಹಿಗಳು ಬೀಡಿ ಸೇದಿ ಎಸೆದಿರಬಹುದು ಎಂಬ ಅನುಮಾನ ವ್ಯಕ್ತವಾಗಿದೆ. ಬೆಳೆ ನಾಶವಾಗಿ ಸಂಕಟಕ್ಕೊಳಗಾದ ಪುಟ್ಟಮ್ಮ, ಸರಕಾರದಿಂದ ಪರಿಹಾರ ನೀಡುವಂತೆ ಮನವಿ ಮಾಡಿದ್ದಾರೆ.