![BY Vijayendra and MLA Basanagouda Patil Yatnal BY Vijayendra and MLA Basanagouda Patil Yatnal](https://kannadatopnews.com/wp-content/uploads/2025/02/Photoshop_Online-news-copy-70.jpg)
BJP ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ (BJP state president BY Vijayendra) ಅವರನ್ನು ಹುದ್ದೆಯಿಂದ ಕೆಳಗಿಳಿಸಲು ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ್ (MLA Basanagouda Patil Yatnal) ಮತ್ತು ಅವರ ಬಣ ತೀವ್ರ ಪ್ರಯತ್ನ ಮಾಡುತ್ತಿದೆ. ಈ ನಿಟ್ಟಿನಲ್ಲಿ ಮಂಗಳವಾರ ಶಾಸಕ ರಮೇಶ್ ಜಾರಕಿಹೊಳಿ ಹಾಗೂ ಕುಮಾರ್ ಬಂಗಾರಪ್ಪ ಹೈಕಮಾಂಡ್ ನಾಯಕರ ಬಳಿ ದೂರು ನೀಡಿದ್ದು, ದಲಿತ ಹಾಗೂ ಒಬಿಸಿ ಅಸ್ತ್ರವನ್ನು ಯಶಸ್ವಿಯಾಗಿ ಬಳಸಿದ್ದಾರೆ. ಈಗ ಲಿಂಗಾಯತ ಅಸ್ತ್ರ ಬಳಸಲು ಸಜ್ಜಾಗಿದ್ದಾರೆ.
ಯತ್ನಾಳ್ ಮತ್ತು ಮಾಜಿ ಸಂಸದ ಸಿದ್ದೇಶ್ವರ್ ನೇತೃತ್ವದಲ್ಲಿ ಹೈಕಮಾಂಡ್ ನಾಯಕರನ್ನು ಭೇಟಿಯಾಗಲು ತಯಾರಿ ನಡೆಯುತ್ತಿದೆ. ಇಡೀ ಲಿಂಗಾಯತ ಸಮುದಾಯ ವಿಜಯೇಂದ್ರ ಬೆಂಬಲಿಸುವಂತಿಲ್ಲ, ಹಾಗಾಗಿ ಅವರ ಸ್ಥಾನಮಾನಕ್ಕೆ ಯಾವುದೇ ಹಾನಿ ಆಗುವುದಿಲ್ಲ ಎಂಬ ವಾದವನ್ನು ಹೈಕಮಾಂಡ್ ಮುಂದೆ ಮುಂದಿರಿಸಲು ಯೋಜನೆ ರೂಪಿಸಿದ್ದಾರೆ. ಇದಕ್ಕೆ ತಟಸ್ಥ ಗುಂಪಿನಲ್ಲಿರುವ ಕೆಲ ನಾಯಕರು ಕೂಡ ಬೆಂಬಲ ನೀಡುತ್ತಿದ್ದಾರೆ.
ಯತ್ನಾಳ್ ಬಣ ಇದೀಗ ವಿಜಯೇಂದ್ರ ವಿರುದ್ಧದ ಹೋರಾಟಕ್ಕೆ ಬಸವರಾಜ ಬೊಮ್ಮಾಯಿಗೆ ನೇತೃತ್ವ ವಹಿಸಬೇಕೆಂದು ಮನವಿ ಮಾಡಿದೆ. ಈ ಕುರಿತು ಹೈಕಮಾಂಡ್ ನಾಯಕರ ಬಳಿ ಮಾತುಕತೆ ನಡೆಸಲು ಬೊಮ್ಮಾಯಿ ಅವರನ್ನೇ ಮುಂದೆ ನಿಲ್ಲಿಸಲು ಪ್ರಯತ್ನಿಸಲಾಗುತ್ತಿದೆ.
ಬಿಜೆಪಿ ವರಿಷ್ಠರ ಮುಂದೆ ಮೂರು ಬೇಡಿಕೆ
- ಕುಟುಂಬ ರಾಜಕಾರಣ ಮುಕ್ತ ಬಿಜೆಪಿ
- ಭ್ರಷ್ಟಾಚಾರ ನಿಲ್ಲಿಸಬೇಕು
- ಹಿಂದುತ್ವದ ವಿರೋಧಿಗಳನ್ನು ಪಕ್ಷದಿಂದ ಹೊರಗೆ ಹಾಕಬೇಕು
ಹಾಗೆಯೇ, ಒಬ್ಬ ವ್ಯಕ್ತಿಗೆ ಒಂದೇ ಹುದ್ದೆ ಎಂಬ ನಿಯಮವನ್ನು ಕಡ್ಡಾಯಗೊಳಿಸಲು ಒತ್ತಾಯಿಸುತ್ತಿದ್ದಾರೆ.
ಈ ಬೆಳವಣಿಗೆಗಳ ನಡುವೆಯೇ ಶ್ರೀರಾಮುಲು ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆ ಪಡೆಯಲು ಉತ್ಸುಕರಾಗಿದ್ದಾರೆ. ದೆಹಲಿ ಚುನಾವಣೆ ಬಳಿಕ ಈ ಬಗ್ಗೆ ಚರ್ಚಿಸಲು ಹೈಕಮಾಂಡ್ ಅವರನ್ನು ಆಹ್ವಾನಿಸಿದೆ. ಇದಕ್ಕೆ ಯತ್ನಾಳ್ ಬಣ ಕೂಡ ಪರೋಕ್ಷ ಬೆಂಬಲ ನೀಡುತ್ತಿರುವುದು ಗಮನಾರ್ಹ.
ಇದರ ನಡುವೆ ವಿಜಯೇಂದ್ರ ಪರವಾಗಿ ಟೀಮ್ ಆಕ್ರೋಶ ವ್ಯಕ್ತಪಡಿಸುತ್ತಿದೆ. ಇಂದು ಎಂಪಿ ರೇಣುಕಾಚಾರ್ಯ ಮಾಧ್ಯಮಗೋಷ್ಠಿ ನಡೆಸಿ, ಯತ್ನಾಳ್ ಬಣದ ನಾಯಕರು ಮೂಲ ಬಿಜೆಪಿ ಕಾರ್ಯಕರ್ತರೇ ಅಲ್ಲ ಎಂದು ಹೇಳಿಕೆ ನೀಡಿದ್ದಾರೆ.
ಯತ್ನಾಳ್ ಬಣದ ಈ ರಾಜಕೀಯ ಚಟುವಟಿಕೆಗಳು ಹೈಕಮಾಂಡ್ ಮಟ್ಟದಲ್ಲಿ ಏನೆಲ್ಲಾ ಬದಲಾವಣೆ ತರಲಿವೆ ಎಂಬ ಕುತೂಹಲ ಮುಂದುವರಿದಿದೆ.