New Delhi: ಮಾರ್ಚ್ 23: ಕೋವಿಡ್ ಬಳಿಕ ಚೀನಾ (China) ದೇಶ ವಿದೇಶೀ ನೇರ ಹೂಡಿಕೆ (FDI) ಕಳೆದುಕೊಳ್ಳುತ್ತಿದೆ. 2021ರಿಂದ ಚೀನಾಗೆ ಶೇ. 99ರಷ್ಟು FDI ಹರಿದುಬರುವುದೇ ನಿಂತಿದೆ. ಕೊರೋನಾ ಲಾಕ್‌ಡೌನ್ ಪರಿಣಾಮವಾಗಿ ಜಾಗತಿಕ ಸರಕು ಸರಬರಾಜು ಸರಪಳಿ ದುರ್ಬಲಗೊಂಡಿತು. ಇದರಿಂದ ಅಮೆರಿಕನ್ ಕಂಪನಿಗಳು ಚೀನಾದಿಂದ ಉತ್ಪಾದನಾ ಘಟಕಗಳನ್ನು ವಿಯೆಟ್ನಾಂ, ಫಿಲಿಪ್ಪೈನ್ಸ್, ಇಂಡೋನೇಷ್ಯಾ, ಭಾರತ ಮೊದಲಾದ ದೇಶಗಳಿಗೆ ವರ್ಗಾಯಿಸುತ್ತಿವೆ.
ಭಾರತವು ವಿಶ್ವದ ಐದನೇ ಅತಿದೊಡ್ಡ ಆರ್ಥಿಕತೆ ಹಾಗೂ ಮ್ಯಾನುಫ್ಯಾಕ್ಚರಿಂಗ್ ಕ್ಷೇತ್ರಕ್ಕೆ ಬಲ ತುಂಬಲು ಪ್ರಯತ್ನಿಸುತ್ತಿದೆ. ಆದರೂ, ಹೆಚ್ಚಿನ ಹೂಡಿಕೆಗಳು ಭಾರತಕ್ಕೆ ಬರುವ ನಿರೀಕ್ಷೆಗಳಿದ್ದರೂ ವಿಯೆಟ್ನಾಂ, ಫಿಲಿಪ್ಪೈನ್ಸ್, ಇಂಡೋನೇಷ್ಯಾದತ್ತ ಹರಿಯುತ್ತಿರುವುದು ಅಚ್ಚರಿಯ ಸಂಗತಿ.
ರೋಡಿಯಂ ಗ್ರೂಪ್ ವರದಿಯ ಪ್ರಕಾರ, 2024ರಲ್ಲಿ ಚೀನಾಗೆ ಹರಿದುಹೋದ FDI ಕೇವಲ 4.5 ಬಿಲಿಯನ್ ಡಾಲರ್, ಇದು 30 ವರ್ಷಗಳಲ್ಲೇ ಅತಿಕಡಿಮೆ ಪ್ರಮಾಣ. ಚೀನಾ ತನ್ನ ಬಂಡವಾಳವನ್ನು ಅಮೆರಿಕ, ಜಪಾನ್ ಅಥವಾ ಯೂರೋಪ್‌ನ ಬದಲು ಹಂಗೆರಿ, ಮೆಕ್ಸಿಕೋ, ಬ್ರೆಜಿಲ್, ಮೊರಾಕ್ಕೋ ಮೊದಲಾದ ದೇಶಗಳಿಗೆ ಚಲಾಯಿಸುತ್ತಿದೆ.
ಜಾಗತಿಕ ಸರಬರಾಜು ಸರಪಳಿಯಲ್ಲಿ ಚೀನೀ ಕಂಪನಿಗಳ ಪ್ರಭಾವ ಹೆಚ್ಚಾಗಿದ್ದು, ಅಮೆರಿಕ ಮೊದಲಾದ ದೇಶಗಳು ಇದರ ವಿರುದ್ಧ ಕ್ರಮ ಕೈಗೊಳ್ಳಲು ಮುಂದಾಗಿವೆ. ಚೀನಾ ಸರ್ಕಾರ ತನ್ನ ಕಂಪನಿಗಳಿಗೆ ನಿರ್ದಿಷ್ಟ ದೇಶಗಳಲ್ಲಿ ಹೂಡಿಕೆ ಮಾಡಬೇಕು ಎಂದು ಸೂಚನೆ ನೀಡುತ್ತಿದೆ.
ಭಾರತಕ್ಕೆ ಬರುವ ಚೀನೀ ಹೂಡಿಕೆಗಳ ಸಂಖ್ಯೆಯಲ್ಲಿ ಕುಸಿತ ಕಂಡುಬಂದಿದೆ. ಬಿವೈಡಿ (BYD) ಮೊದಲಾದ ಕಂಪನಿಗಳು ಭಾರತ ಪ್ರವೇಶಿಸಲು ಸಾಧ್ಯವಾಗದಿರುವುದು, ಚೀನಾ ಸರ್ಕಾರದ ನಿರ್ಧಾರಗಳ ಪರಿಣಾಮವಾಗಬಹುದು. ಚೀನಾ ಭಾರತಕ್ಕೆ ಸೌರೋಪಕರಣ, ಇವಿ ಬಿಡಿಭಾಗ, ಎಲೆಕ್ಟ್ರಾನಿಕ್ಸ್ ಭಾಗಗಳ ರಫ್ತನ್ನು ನಿಯಂತ್ರಿಸುತ್ತಿದೆ.
ಭಾರತದಲ್ಲಿನ ಕಠಿಣ ಕಾರ್ಮಿಕ ಕಾನೂನುಗಳು, ಹೆಚ್ಚಿನ ಸುಂಕ ಇತ್ಯಾದಿ ಕಾರಣಗಳಿಂದ ಏಪಲ್ (Apple) ಸೇರಿದಂತೆ ಹಲವಾರು ಕಂಪನಿಗಳು ಸಂಪೂರ್ಣವಾಗಿ ಇಲ್ಲಿಗೆ ಹೂಡಿಕೆ ಮಾಡಲು ಹಿಂಜರಿಯುತ್ತಿವೆ. ಹೀಗಾಗಿ, ಚೀನಾ ತನ್ನ ತಂತ್ರಗಳಿಂದ ಭಾರತಕ್ಕೆ ಬರುವ ಹೂಡಿಕೆ ಕಡಿಮೆ ಮಾಡಿಸುತ್ತಿದೆಯಾ ಎಂಬ ಪ್ರಶ್ನೆ ಉದ್ಭವಿಸುತ್ತದೆ.