Bengaluru: ಅನೇಕ ಕಡೆ ಖಾಸಗಿಯವರು ರಾಜಕಾಲುವೆ ಒತ್ತುವರಿ (Rajkaluve Encroachment) ತೆರವುಗೊಳಿಸದಂತೆ ನ್ಯಾಯಲಯದಿಂದ ತಡೆಯಾಜ್ಞೆ (injunction from the court) ತಂದಿದ್ದಾರೆ. ಇವರು ಕೆಲಸ ಮಾಡಲು ಬಿಡುತ್ತಿಲ್ಲ. ತುರ್ತು ಸಂದರ್ಭದಲ್ಲಿ ಇವುಗಳಿಗೆ ಅವಕಾಶವಿಲ್ಲ.
ತೆರವುಗೊಳಿಸಲು ಕಾನೂನಿನಲ್ಲಿ ಅವಕಾಶವಿದೆ. ಯಾವುದನ್ನೂ ಪರಿಗಣಿಸದೇ ಕೂಡಲೇ ಎಲ್ಲಾ ಒತ್ತುವರಿಗಳನ್ನು ತೆರವುಗೊಳಿಸಿ ಹಾಗೂ ಪ್ರವಾಹ ಪರಿಸ್ಥಿತಿ ನಿರ್ವಹಣೆ ಅಡಿಯಲ್ಲಿ ಕೂಡಲೇ ಆದೇಶ ಹೊರಡಿಸಿ ಎಂದು ಜಿಲ್ಲಾಧಿಕಾರಿಗಳಿಗೆ ತಿಳಿಸಿರುವುದಾಗಿ ಡಿಸಿಎಂ ಡಿಕೆ ಶಿವಕುಮಾರ್ (D K Shivakumar) ಹೇಳಿದರು.
ಬೆಂಗಳೂರಿನಲ್ಲಿ (Bengaluru) ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, BDA ಮತ್ತು BBMPಗೂ ಸೂಚನೆ ನೀಡಿದ್ದೇನೆ. ಯಾರೇ ಖಾಸಗಿಯವರು ಅಡ್ಡಿ ಪಡಸಿದರೂ ನಾವು ನಮ್ಮ ಕೆಲಸ ಮಾಡುತ್ತೇವೆ.
ಇಂತಹ ಸಂದರ್ಭದಲ್ಲಿ ನ್ಯಾಯಲಯದ ಪ್ರಕರಣ ಮುಖ್ಯವಲ್ಲ. ನಮಗೆ ಸಾರ್ವಜನಿಕರ ಹಿತ ಮುಖ್ಯ. ನೀರು ಸರಾಗವಾಗಿ ಹರಿಯುವ ಕಡೆ ಒತ್ತುವರಿ ತೆರವುಗೊಳಿಸಲು ಕೂಡಲೇ ಕೆಲಸ ಮಾಡಬೇಕು ಎಂದು ಆದೇಶ ನೀಡಿದ್ದೇನೆಂದರು.
ಅನೇಕರು ವಯಸ್ಸಾದವರು ಮನೆ ಬಿಟ್ಟು ಹೊರಗೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಮನೆಯ ಬಗ್ಗೆ ಭಾವನಾತ್ಮಕವಾಗಿ ಯೋಚನೆ ಮಾಡುತ್ತಿದ್ದಾರೆ. ಅಂತಹವರಿಗೆ ಒಂದು ವಾರದ ಮಟ್ಟಿಗೆ ಹತ್ತಿರದಲ್ಲಿಯೇ ವಸತಿಗೃಹಗಳಲ್ಲಿ ವ್ಯವಸ್ಥೆ ಮಾಡಿಕೊಡಲಾಗುವುದು.
ಇದು ನಮ್ಮ ಜವಾಬ್ದಾರಿ. ಇಲ್ಲಿನ ನಿವಾಸಿಗಳ ಸಂಘದವರೂ ಸಹಕಾರ ನೀಡುತ್ತಿದ್ದಾರೆ. ತೊಂದರೆಗೆ ಒಳಗಾದವರಿಗೆ ಅವರ ಮನೆಯಂತೆಯೇ ಸೌಲಭ್ಯ ಕಲ್ಪಿಸಿಕೊಡಲಾಗುವುದು. ನಿವಾಸಿಗಳು ಮುಜುಗರಕ್ಕೆ ಒಳಗಾಗದೇ ಅಧಿಕಾರಿಗಳ ಬಳಿ ಕೇಳಿ ಸೌಲಭ್ಯ ಪಡೆದುಕೊಳ್ಳಬೇಕು ಎಂದು ತಿಳಿಸಿದರು.