
ರಾಜ್ಯದಲ್ಲಿ BJP ಸರ್ಕಾರದ ಅವಧಿಯಲ್ಲಿ ಸ್ಥಾಪಿಸಲಾದ 10 ಹೊಸ ವಿಶ್ವವಿದ್ಯಾಲಯಗಳಲ್ಲಿ (Universities) 9 ಅನ್ನು ಮುಚ್ಚಲು ಸಚಿವ ಸಂಪುಟ ಉಪಸಮಿತಿ ತೀರ್ಮಾನಿಸಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಬೆಂಗಳೂರಿನ ಮಹಾರಾಣಿ ಕ್ಲಸ್ಟರ್ ಮತ್ತು ನೃಪತುಂಗ ವಿಶ್ವವಿದ್ಯಾಲಯ ಸೇರಿದಂತೆ 9 ವಿಶ್ವವಿದ್ಯಾಲಯಗಳನ್ನು ಮುಚ್ಚಲು ನಿರ್ಧಾರ ಮಾಡಲಾಗಿದೆ. ಆದರೆ ಬೀದರ್ ವಿಶ್ವವಿದ್ಯಾಲಯ ಮಾತ್ರ ಉಳಿಯಲಿದೆ, ಏಕೆಂದರೆ ಅದು 150 ಸಂಯೋಜಿತ ಕಾಲೇಜುಗಳೊಂದಿಗೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ವಿಶ್ವವಿದ್ಯಾಲಯ ನಿರ್ವಹಣೆಗೆ ಅಗತ್ಯವಿರುವ ಹಣಕಾಸಿನ ಕೊರತೆ ಈ ತೀರ್ಮಾನದ ಪ್ರಮುಖ ಕಾರಣ ಎಂದು ತಿಳಿಸಲಾಗಿದೆ.
ಹೊಸ ವಿಶ್ವವಿದ್ಯಾಲಯಗಳನ್ನು ಸುಗಮವಾಗಿ ನಡೆಸಲು ಜಮೀನಿನ ವೆಚ್ಚವನ್ನು ಹೊರತುಪಡಿಸಿ, ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯ ವೇತನ, ಮೂಲ ಸೌಕರ್ಯ, ಸಲಕರಣೆ, ವಾಹನ, ಪೀಠೋಪಕರಣಗಳ ಖರೀದಿಗೆ 342 ಕೋಟಿ ರೂ. ಅಗತ್ಯವಿದೆ ಎಂದು ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ ವರದಿ ನೀಡಿತ್ತು.
ಮುಚ್ಚಲಾದ ವಿಶ್ವವಿದ್ಯಾಲಯಗಳು
- ಹಾಸನ
- ಚಾಮರಾಜನಗರ
- ಹಾವೇರಿ
- ಕೊಡಗು
- ಕೊಪ್ಪಳ
- ಬಾಗಲಕೋಟೆ
- ಮಹಾರಾಣಿ ಕ್ಲಸ್ಟರ್ (ಬೆಂಗಳೂರು)
- ಮಂಡ್ಯ
- ನೃಪತುಂಗ (ಬೆಂಗಳೂರು)
ಈ ನಿರ್ಧಾರಕ್ಕೆ ವಿರೋಧ ಪಕ್ಷಗಳಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಮೇಲ್ಮನೆಯ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಈ ತೀರ್ಮಾನವನ್ನು ಬಿಜೆಪಿ ಸರ್ಕಾರದ ಯೋಜನೆಗಳನ್ನು ಹಿಂಪಡೆಯುವ ಕೃತ್ಯ ಎಂದು ಟೀಕಿಸಿದರು. ದೂರದ ಪ್ರದೇಶದ ವಿದ್ಯಾರ್ಥಿಗಳಿಗೆ ಶಿಕ್ಷಣ ಸುಲಭವಾಗಲು ಈ ವಿಶ್ವವಿದ್ಯಾಲಯಗಳು ಅಗತ್ಯವಿವೆ ಎಂದು ಅವರು ಒತ್ತಿ ಹೇಳಿದರು.
ಈ ನಿರ್ಧಾರದಿಂದ ರಾಜ್ಯದ ವಿದ್ಯಾರ್ಹತೆ ಮತ್ತು ವಿದ್ಯಾರ್ಥಿಗಳ ಭವಿಷ್ಯ ಏನಾಗಲಿದೆ ಎಂಬ ಪ್ರಶ್ನೆ ಉದ್ಭವಿಸಿದೆ.