ಮುಂಬೈನಲ್ಲಿ ಕಳೆದ ಮೂರು ದಿನಗಳಿಂದ ಎಡಬಿಡದೇ ಮಳೆ ಸುರಿಯುತ್ತಿದೆ. ಇದರ ಪರಿಣಾಮವಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ.
ಹಲವಾರು ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ. ರಸ್ತೆಯಲ್ಲಿ ನೀರು ನಿಂತು ಟ್ರಾಫಿಕ್ ದಟ್ಟಣೆ ಉಂಟಾಗಿದೆ. ಸ್ಥಳೀಯ ರೈಲು ಸಂಚಾರಕ್ಕೂ 15–20 ನಿಮಿಷ ವಿಳಂಬವಾಗಿದೆ.
ಮುಂಬೈ, ಥಾಣೆ, ರಾಯಗಢ, ರತ್ನಗಿರಿ ಜಿಲ್ಲೆಗಳಿಗೆ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದೆ. ಸಿಂಧುದುರ್ಗ ಜಿಲ್ಲೆಗೆ ಆರೆಂಜ್ ಅಲರ್ಟ್ ನೀಡಲಾಗಿದೆ.
ಶನಿವಾರದಿಂದ ನಿರಂತರ ಮಳೆ ಸುರಿಯುತ್ತಿದ್ದು, ಇಂದು ಬೆಳಿಗ್ಗೆ 9ರಿಂದ ಮಳೆ ಮತ್ತಷ್ಟು ತೀವ್ರವಾಗಿದೆ. ಚೆಂಬೂರ್‌ನಲ್ಲಿ ಅತಿ ಹೆಚ್ಚು 65 ಮಿ.ಮೀ ಮಳೆ ದಾಖಲಾಗಿದೆ. ಶಿವಾಜಿ ನಗರದಲ್ಲಿ 50 ಮಿ.ಮೀ ಮಳೆ ಸುರಿದಿದೆ.
ಭಾರೀ ಮಳೆಯಿಂದ ಕೊಂಕಣ ಮತ್ತು ಗೋವಾದಲ್ಲಿ ಹಠಾತ್ ಪ್ರವಾಹ ಉಂಟಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.
ಮುಂಬೈ ಮಹಾನಗರ ಪಾಲಿಕೆ ಎಲ್ಲಾ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿದೆ. ಜನರು ಅಗತ್ಯವಿದ್ದರೆ ಮಾತ್ರ ಹೊರಗೆ ಬರಲು ಸೂಚನೆ ನೀಡಲಾಗಿದೆ.