New Delhi: Ola and Uber ಮಾದರಿಯಲ್ಲಿ ಸಹಕಾರಿ ಟ್ಯಾಕ್ಸಿ (Cooperative taxi) ಸೇವೆಯನ್ನು ಶೀಘ್ರದಲ್ಲೇ ಆರಂಭಿಸಲಾಗುವುದು ಎಂದು ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ (Minister Amit Shah) ಸಂಸತ್ತಿನಲ್ಲಿ ಘೋಷಿಸಿದರು. ಬುಧವಾರ ಲೋಕಸಭೆಯಲ್ಲಿ ತ್ರಿಭುವನ್ ಸಹಕಾರಿ ವಿಶ್ವವಿದ್ಯಾಲಯ ಮಸೂದೆಯ ಚರ್ಚೆಗೆ ಉತ್ತರಿಸುತ್ತಾ, ಈ ಸಹಕಾರಿ ಟ್ಯಾಕ್ಸಿಯಿಂದ ಆಗುವ ಲಾಭ ಯಾವುದೇ ಶ್ರೀಮಂತ ವ್ಯಕ್ತಿಗೆ ಅಲ್ಲ, ನೇರವಾಗಿ ಟ್ಯಾಕ್ಸಿ ಚಾಲಕರಿಗೆ ಸಿಗುತ್ತದೆ ಎಂದು ಹೇಳಿದರು.
ಜೊತೆಗೆ, ಸಹಕಾರಿ ವಿಮಾ ಕಂಪನಿಯನ್ನೂ ಶೀಘ್ರದಲ್ಲೇ ಆರಂಭಿಸಲಾಗುವುದು ಎಂದು ತಿಳಿಸಿದರು. ಗುಜರಾತ್ ನಲ್ಲಿ ತ್ರಿಭುವನ್ ಸಹಕಾರಿ ವಿಶ್ವವಿದ್ಯಾಲಯ ಸ್ಥಾಪನೆ ಸಂಬಂಧಿಸಿದ ಪ್ರಶ್ನೆಗಳಿಗೆ ಉತ್ತರಿಸುತ್ತಾ, ವಿಶ್ವವಿದ್ಯಾಲಯವು ದೇಶದಾದ್ಯಂತ ಕಾರ್ಯನಿರ್ವಹಿಸುವಂತೆ ರೂಪಿಸಲಾಗುವುದು ಎಂದು ಸ್ಪಷ್ಟಪಡಿಸಿದರು.
ಸಹಕಾರಿ ಸಂಸ್ಥೆಗಳು ವೇಗವಾಗಿ ಬೆಳೆಯುತ್ತಿರುವುದರಿಂದ, ಈ ವಿಶ್ವವಿದ್ಯಾಲಯ ತರಬೇತಿ ಪಡೆದ ಉದ್ಯೋಗಾರ್ಥಿಗಳಿಗೆ ಹೆಚ್ಚಿನ ಅವಕಾಶಗಳನ್ನು ಒದಗಿಸುತ್ತದೆ. ವಿದ್ಯಾರ್ಥಿಗಳಿಗೆ ಡಿಪ್ಲೊಮಾದಿಂದ ಪಿಎಚ್.ಡಿ.ವರೆಗೆ ಕೋರ್ಸುಗಳಿರುತ್ತವೆ. ಸಹಕಾರಿ ಸಂಸ್ಥೆಗಳ ಅವಶ್ಯಕತೆಗೆ ತಕ್ಕಂತೆ ಕೋರ್ಸುಗಳನ್ನು ವಿನ್ಯಾಸಗೊಳಿಸಲು ಈಗಾಗಲೇ ಪ್ರಾರಂಭಿಸಲಾಗಿದೆ.
ಈ ವಿಶ್ವವಿದ್ಯಾಲಯವು ತಳಮಟ್ಟದಲ್ಲಿ ಸಹಕಾರಿ ಸಂಘಟನೆಗಳನ್ನು ಬಲಪಡಿಸಲು, ಗ್ರಾಮೀಣ ಆರ್ಥಿಕತೆಯನ್ನು ಉತ್ತೇಜಿಸಲು ಮತ್ತು ಉತ್ತಮ ಸಹಕಾರಿ ತಜ್ಞರನ್ನು ಒದಗಿಸಲು ಸಹಾಯಕವಾಗಲಿದೆ. ಇದು ಸೊಸೈಟಿ ನೋಂದಣಿ ಕಾಯ್ದೆಯಡಿ ಪ್ರಥಮ ಸಹಕಾರಿ ವಿಶ್ವವಿದ್ಯಾಲಯವಾಗಲಿದೆ ಎಂದು ಅಮಿತ್ ಶಾ ಹೇಳಿದರು.