Bengaluru: ರಾಜ್ಯದಲ್ಲಿ ಸಹಕಾರ ಕಾಯಿದೆಯಡಿ ರಚನೆಯಾದ ಸಂಘಗಳು ನಿಯಮಗಳನ್ನು (Cooperative Society) ಸರಿಯಾಗಿ ಪಾಲಿಸುತ್ತಿರುವುದೇ ಎಂಬುದನ್ನು ಪರಿಶೀಲಿಸಲು ಸಾಮಾನ್ಯ ಪೋರ್ಟಲ್ ರಚಿಸುವಂತೆ ಹೈಕೋರ್ಟ್ (High Court) ರಾಜ್ಯ ಸಹಕಾರ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ನಿರ್ದೇಶನ ನೀಡಿದೆ.
ಈ ಆದೇಶವನ್ನು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ಪೀಠ, ಬೆಂಗಳೂರಿನ ನಾಗರಭಾವಿಯ ಎಂ.ಆರ್. ರುಕ್ಮಾಂಗದ ವಿಶ್ವಪ್ರಜ್ಞ ಕೋ ಆಪರೇಟಿವ್ ಕ್ರೆಡಿಟ್ ಸೊಸೈಟಿಯ ವಿರುದ್ಧ ಸಲ್ಲಿಸಲಾದ ಅರ್ಜಿಯ ವಿಚಾರಣೆ ವೇಳೆ ನೀಡಿತು. ಹೈಕೋರ್ಟ್ ಆದೇಶದಂತೆ, ರಾಜ್ಯ ಸರ್ಕಾರವು ನಾಲ್ಕು ವಾರಗಳಲ್ಲಿ ವಿಸ್ತೃತ ಯೋಜನಾ ವರದಿ ಸಲ್ಲಿಸಬೇಕು.
ಪೋರ್ಟಲ್ ಲಾಭಗಳು ಮತ್ತು ಕಾರ್ಯವಿಧಾನ
- ಸಹಕಾರ ಸಂಘಗಳ ಮೇಲಿನ ನಿಗಾವಹಿಸಲು ಸಹಕಾರ ಇಲಾಖೆ, ಕೋ-ಆಪರೇಟಿವ್ ರಿಜಿಸ್ಟ್ರಾರ್ ಮತ್ತು ಇ-ಆಡಳಿತ ಇಲಾಖೆ ಒಗ್ಗೂಡಿ ಕಾಮನ್ ಪೋರ್ಟಲ್ ರಚಿಸಬೇಕು.
- ಈ ಪೋರ್ಟಲ್‌ನಲ್ಲಿ ರಾಜ್ಯದ ಎಲ್ಲಾ ಸಹಕಾರಿ ಸಂಘಗಳ ಮಾಹಿತಿಯನ್ನು ಅಪ್‌ಲೋಡ್ ಮಾಡಬೇಕು.
- ಯಾವ ನಿಯಮಗಳನ್ನು ಪಾಲಿಸಲಾಗುತ್ತಿದೆ ಎಂಬ ವಿವರಗಳು ಅಲ್ಲಿ ಲಭ್ಯವಿರಬೇಕು.
- ರಿಜಿಸ್ಟ್ರಾರ್ ಆಫ್ ಕೋ-ಆಪರೇಟಿವ್‌ಗಳಿಗೆ ಈ ಪೋರ್ಟಲ್ ಪ್ರವೇಶವನ್ನು ನೀಡಿ, ಸಂಘಗಳ ಮೇಲಿನ ನಿಗಾವಹಿಸಲು ಅನುಕೂಲವಾಗಬೇಕು.
ನಿಯಮ ಉಲ್ಲಂಘನೆಗೆ ತಕ್ಷಣದ ಕ್ರಮ
- ಪೋರ್ಟಲ್ ಮೂಲಕ ನಿಯಮ ಉಲ್ಲಂಘನೆಗೆ ಸ್ವಯಂಚಾಲಿತ ರಿಮೈಂಡರ್‌ಗಳನ್ನು ಕಳುಹಿಸಬಹುದು.
- ಸಂಘಗಳು ನಿಯಮಗಳನ್ನು ಪಾಲಿಸದಿದ್ದರೆ, ತಕ್ಷಣದ ಕ್ರಮ ಕೈಗೊಳ್ಳಲು ಸಾಧ್ಯವಾಗುತ್ತದೆ.
- ಇ-ಮೇಲ್, ಎಸ್‌ಎಂಎಸ್, ವಾಟ್ಸಪ್ ಮೂಲಕ ನೋಟಿಸ್ ಕಳುಹಿಸುವ ವ್ಯವಸ್ಥೆ ಮಾಡಬೇಕು, ಇದರಿಂದ ತಡವಿಲ್ಲದೆ ಮಾಹಿತಿ ತಲುಪಲು ಸಾಧ್ಯ.
ಈ ಹೊಸ ಪೋರ್ಟಲ್ ಸಹಕಾರ ಸಂಘಗಳ ಸುಗಮ ಕಾರ್ಯನಿರ್ವಹಣೆಗೆ ಸಹಾಯವಾಗಲಿದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.