New Delhi: ಡಾನಾ ಚಂಡಮಾರುತವು (Cyclone Dana) ಒಡಿಶಾ (Odisha) ಕರಾವಳಿಗೆ ಶುಕ್ರವಾರ ಅಪ್ಪಳಿಸಿದೆ. ಅದರ ರಭಸಕ್ಕೆ ಜನರು ತತ್ತರಿಸಿದ್ದಾರೆ. ಮರಗಳು ಬುಡಮೇಲಾಗಿದ್ದು, ಅನೇಕ ಪ್ರದೇಶಗಳಲ್ಲಿ ವಿದ್ಯುತ್ ಕಂಬಗಳು ಮುರಿದು ಬಿದ್ದ ಪರಿಣಾಮ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಪಶ್ಚಿಮ ಬಂಗಾಳದಲ್ಲಿ (West Bengal) ಬಿರುಗಾಳಿ ಮಳೆಗೆ ಒಬ್ಬ ವ್ಯಕ್ತಿ ಬಲಿಯಾಗಿದ್ದಾನೆ.
ಚಂಡಮಾರುತವು ಬೆಳಿಗ್ಗೆ 10 ಗಂಟೆ ಸುಮಾರಿಗೆ ಅಪ್ಪಳಿಸುವ ಪ್ರಕ್ರಿಯೆ ಪೂರ್ಣಗೊಂಡಿತು. ಭೂ ಪ್ರದೇಶದಕ್ಕೆ ಇಳಿಯಲು ಅದು ಕನಿಷ್ಠ ಎಂಟೂವರೆ ಗಂಟೆ ತೆಗೆದುಕೊಂಡಿತು ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ.
ಇದರ ಆರ್ಭಟ ಈಗ ಜೋರಾಗಿದ್ದರೂ, ಮುಂದಿನ ಆರು ಗಂಟೆಗಳಲ್ಲಿ ಅದರ ಅಬ್ಬರ ಕ್ರಮೇಣ ಕಡಿಮೆಯಾಗಲಿದ್ದು, ದುರ್ಬಲವಾಗಲಿದೆ ಎಂದು ಐಎಂಡಿ ಹೇಳಿದೆ.
ಒಡಿಶಾದಲ್ಲಿ ಅನೇಕ ಕಡೆ ಮರಗಳು ಧರೆಗುರುಳಿವೆ. ವಿವಿಧ ಪ್ರದೇಶಗಳು ಜಲಾವೃತವಾಗಿವೆ. ತೀವ್ರ ಸ್ವರೂಪದ ಚಂಡಮಾರುತ ಹಾಗೂ ಮಳೆ ನಡುವೆಯೂ ಯಾವುದೇ ಜೀವ ಹಾನಿ ಉಂಟಾಗಿಲ್ಲ ಎಂದು ಒಡಿಶಾ ಸಿಎಂ ಮೋಹನ್ ಚರಣ್ ಮಾಂಝಿ ತಿಳಿಸಿದ್ದಾರೆ.
ಭುವನೇಶ್ವರದ ಬಿಜು ಪಟ್ನಾಯಕ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಹಾಗೂ ಕೋಲ್ಕತಾದ ನೇತಾಜಿ ಸುಭಾಷ್ ಚಂದ್ರ ಬೋಸ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ವಿಮಾನ ಸಂಚಾರವನ್ನು ಮುಂಜಾಗ್ರತಾ ಕ್ರಮವಾಗಿ ಗುರುವಾರ ಸಂಜೆಯಿಂದ ಸ್ಥಗಿತಗೊಳಿಸಲಾಗಿತ್ತು. ಬೆಳಿಗ್ಗೆ 8 ಗಂಟೆಗೆ ಸೇವೆಗಳು ಪುನರಾರಂಭಗೊಂಡಿವೆ.
ಒಡಿಶಾದಲ್ಲಿ ಸುಮರು 5.8 ಲಕ್ಷ ಜನರನ್ನು ಸ್ಥಳಾಂತರಗೊಳಿಸಲಾಗಿದೆ. ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್, ಅಗ್ನಿಶಾಮಕ ಮತ್ತು ಅರಣ್ಯ ಸಿಬ್ಬಂದಿ ಸೇರಿದಂತೆ 385 ರಕ್ಷಣಾ ತಂಡಗಳನ್ನು ನಿಯೋಜಿಸಲಾಗಿದೆ ಎಂದು ಸಿಎಂ ಮಾಂಝಿ ಕಚೇರಿ ತಿಳಿಸಿದೆ.
ಪಶ್ಚಿಮ ಬಂಗಾಳದಲ್ಲಿ 2.43 ಲಕ್ಷ ಜನರನ್ನು ಪುನರ್ವಸತಿ ಕೇಂದ್ರಗಳಿಗೆ ಸಾಗಿಸಲಾಗಿದೆ ಎಂದು ಸಿಎಂ ಮಮತಾ ಬ್ಯಾನರ್ಜಿ ತಿಳಿಸಿದ್ದಾರೆ. ಗುರುವಾರ ಇಡೀ ರಾತ್ರಿ ಕಚೇರಿಯಲ್ಲಿಯೇ ಕಳೆದ ಅವರು, ಪರಿಸ್ಥಿತಿಯನ್ನು ಖುದ್ದು ಅವಲೋಕಿಸಿದರು.