New Delhi: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಮತಗಳವು ಆರೋಪಗಳ ಕುರಿತು 7 ದಿನಗಳಲ್ಲಿ ಸಾಕ್ಷ್ಯ ಸಲ್ಲಿಸಲು ಸೂಚಿಸಿರುವ ಕೇಂದ್ರ ಚುನಾವಣಾ ಆಯೋಗದ ವಿರುದ್ಧ, ಐ.ಎನ್.ಡಿ.ಐ.ಎ (I.N.D.I.A) ಕೂಟ ತಂತ್ರ ರೂಪಿಸಲು ಮುಂದಾಗಿದೆ. ಮೂಲಗಳ ಪ್ರಕಾರ, ಸಂಸತ್ ಅಧಿವೇಶನದಲ್ಲಿ ಸಿಇಸಿ ಜ್ಞಾನೇಶ್ ಕುಮಾರ್ (CEC Gyanesh Kumar) ವಿರುದ್ಧ ಮಹಾಭಿಯೋಗ ನಿರ್ಣಯ (ಪದಚ್ಯುತಿ) ಮಂಡಿಸುವ ಕುರಿತು ಚಿಂತನೆ ನಡೆಯುತ್ತಿದೆ.
ಕಾಂಗ್ರೆಸ್ ರಾಜ್ಯಸಭಾ ಸಂಸದ ಸೈಯದ್ ನಸೀರ್ ಹುಸೇನ್ ಹೇಳುವಂತೆ, “ವಿಪಕ್ಷಗಳು ಪ್ರಜಾಪ್ರಭುತ್ವದ ಎಲ್ಲಾ ತಂತ್ರಗಳನ್ನು ಬಳಸಲು ಸಿದ್ಧವಾಗಿವೆ. ಅಗತ್ಯ ಬಿದ್ದರೆ ಮುಖ್ಯ ಚುನಾವಣಾಧಿಕಾರಿಯನ್ನು ಪದಚ್ಯುತಿಗೊಳಿಸಲು ಮಹಾಭಿಯೋಗ ನಿರ್ಣಯ ಮಂಡಿಸಲಾಗುವುದು. ಆದರೆ, ಈಗಾಗಲೇ ಅಂತಹ ಔಪಚಾರಿಕ ಚರ್ಚೆಗಳು ನಡೆದಿಲ್ಲ” ಎಂದರು.
ಕೇಂದ್ರ ಚುನಾವಣಾ ಆಯೋಗದ ಮುಖ್ಯಸ್ಥ ಜ್ಞಾನೇಶ್ ಕುಮಾರ್, ರಾಹುಲ್ ಗಾಂಧಿ ಅವರು ಮಾಡಿದ ಮತಗಳವು ಆರೋಪಗಳಿಗೆ ಸಂಬಂಧಿಸಿದಂತೆ, 7 ದಿನಗಳ ಒಳಗಾಗಿ ಸಾಕ್ಷ್ಯಾಧಾರಗಳೊಂದಿಗೆ ಅಫಿಡವಿಟ್ ಸಲ್ಲಿಸಲು ಸೂಚಿಸಿದ್ದಾರೆ. ಸಾಕ್ಷ್ಯ ಒದಗಿಸಲಾಗದಿದ್ದರೆ, ರಾಹುಲ್ ಗಾಂಧಿ ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದ್ದಾರೆ.
ಚುನಾವಣಾ ಆಯೋಗವು ರಾಹುಲ್ ಗಾಂಧಿಯಿಂದ ಮಾತ್ರ ಅಫಿಡವಿಟ್ ಕೇಳಿರುವುದಕ್ಕೆ ಕಾಂಗ್ರೆಸ್ ಕಿಡಿಕಾರಿದೆ. ಬಿಜೆಪಿ ಸಂಸದ ಅನುರಾಗ್ ಠಾಕೂರ್ ಸಹ ಇದೇ ರೀತಿಯ ಮತಗಳವು ಆರೋಪಗಳನ್ನು ಮಾಡಿದ್ದರೂ, ಅವರಿಂದ ಅಫಿಡವಿಟ್ ಯಾಕೆ ಕೋರಿಲ್ಲ ಎಂದು ಪ್ರಶ್ನಿಸಿದೆ.
ಈ ಬೆಳವಣಿಗೆಯು ಸಂಸತ್ ಅಧಿವೇಶನದಲ್ಲಿ ತೀವ್ರ ರಾಜಕೀಯ ಘರ್ಷಣೆಗೆ ದಾರಿ ಮಾಡಿಕೊಡಬಹುದೆಂದು ರಾಜಕೀಯ ವಲಯದಲ್ಲಿ ಚರ್ಚೆ ಶುರುವಾಗಿದೆ.