Vijayapura, Devanahalli, Karnataka : ಪಟ್ಟಣದಲ್ಲಿ ಎಲ್ಲೆಂದರಲ್ಲಿ ಅಡ್ಡಾದಿಡ್ಡಿಯಾಗಿ ವಾಹನ ನಿಲ್ಲಿಸಿ ಸಾರ್ವಜನಿಕರಿಗೆ ತೊಂದರೆ ಉಂಟುಮಾಡುತ್ತಿದ್ದ ವಾಹನ ಸವಾರರಿಗೆ ವಿಜಯಪುರ ಟೌನ್ ಪೊಲೀಸರು ಭಾನುವಾರ ದಂಡ ವಿಧಿಸಿ ಎಚ್ಚರಿಕೆ ನೀಡಿದ್ದಾರೆ.
ಪಟ್ಟಣದಲ್ಲಿ ರಸ್ತೆ ವಿಸ್ತರಣೆ ಕಾಮಗಾರಿ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ, ಕೆಲವರು ಬಸ್ ನಿಲ್ದಾಣ, ಚನ್ನರಾಯಪಟ್ಟಣ ರಸ್ತೆ, ವೆಂಕಟರಮಣ ದೇವಾಲಯದ ರಸ್ತೆ, ಬಜಾರ್ ರಸ್ತೆ ಹಾಗೂ ಹಳೆ ಆಸ್ಪತ್ರೆ ರಸ್ತೆ ಸೇರಿದಂತೆ ಪ್ರಮುಖ ಬೀದಿಗಳಲ್ಲಿ ಅನಿಯಂತ್ರಿತವಾಗಿ ವಾಹನ ನಿಲ್ಲಿಸುತ್ತಿದ್ದು, ಇದು ಇತರ ವಾಹನ ಸವಾರರು ಹಾಗೂ ಪಾದಚಾರಿಗಳಿಗೆ ತೊಂದರೆಯ ಕಾರಣವಾಗಿತ್ತು.
ಇದರಿಂದ ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿದ್ದ ಹಿನ್ನೆಲೆಯಲ್ಲಿ, ಪೊಲೀಸರು ಭಾನುವಾರ ಬೆಳಿಗ್ಗೆಯಿಂದ ಸಂಜೆವರೆಗೂ ತೀವ್ರ ಕಾರ್ಯಾಚರಣೆ ನಡೆಸಿದರು. ಅಡ್ಡಾದಿಡ್ಡಿಯಾಗಿ ವಾಹನ ನಿಲ್ಲಿಸಿದ್ದ ಸವಾರರಿಗೆ ₹500 ರಿಂದ ₹1,000 ವರೆಗೆ ದಂಡ ವಿಧಿಸಿ, ಸ್ಥಳದಲ್ಲೇ ವಾಹನ ತೆರವುಗೊಳಿಸಲಾಯಿತು.
ರಸ್ತೆ ವಿಸ್ತರಣೆ ಕಾಮಗಾರಿ ನಡೆಯುತ್ತಿರುವ ಈ ಅವಧಿಯಲ್ಲಿ, ಸಾರ್ವಜನಿಕರು ಸಹಕಾರ ನೀಡುವುದು ಅತ್ಯವಶ್ಯಕ ಎಂದು ಪೊಲೀಸ್ ಇಲಾಖೆಯು ಮನವಿ ಮಾಡಿದೆ. “ರಸ್ತೆ ಬದಿಗಳಲ್ಲಿ ಹಾಗೂ ಕಿರಿದಾದ ಬೀದಿಗಳಲ್ಲಿ ವಾಹನ ನಿಲ್ಲಿಸುವುದು ವಾಹನ ದಟ್ಟಣೆ ಹಾಗೂ ಜನರ ಓಡಾಟಕ್ಕೆ ಅಡಚಣೆ ಉಂಟುಮಾಡುತ್ತಿದೆ. ಹೀಗಾಗಿ ಅಡ್ಡಾದಿಡ್ಡಿ ನಿಲುಗಡೆಗೆ ದಂಡ ವಿಧಿಸಿ ಕ್ರಮ ಕೈಗೊಳ್ಳಲಾಗಿದೆ. ವಾಹನ ತೆರವುಗೊಳಿಸಿ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿದೆ,” ಎಂದು ಟೌನ್ ಪಿಎಸ್‌ಐ ಸಾದಿಕ್ ಪಾಷಾ ತಿಳಿಸಿದ್ದಾರೆ.







