Tumkur (Tumakuru) : ತುಮಕೂರು ತಾಲ್ಲೂಕಿನ ಐತಿಹಾಸಿಕ ಪ್ರಸಿದ್ಧ ಕರಿಗಿರಿ ಕ್ಷೇತ್ರ ದೇವರಾಯನದುರ್ಗ ಲಕ್ಷ್ಮಿನರಸಿಂಹಸ್ವಾಮಿ ಬ್ರಹ್ಮರಥೋತ್ಸವ (Devarayanadurga Lakshmi Narasimha Swamy Temple Brahma Rathotsava) ಗುರುವಾರ ಪುಬ್ಬಾ ನಕ್ಷತ್ರದಲ್ಲಿ ಭಕ್ತಾದಿಗಳ ಹರ್ಷೋದ್ಗಾರದ ನಡುವೆ ಗರುಡ ಬಂದು ರಥಕ್ಕೆ ಪ್ರದಕ್ಷಿಣೆ ಹಾಕಿದ ನಂತರ ವಿಧ್ಯುಕ್ತವಾಗಿ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.
ಮುಂಜಾನೆಯಿಂದಲೇ ರಥೋತ್ಸವದ ಅಂಗವಾಗಿ ಧಾರ್ಮಿಕ ಪೂಜಾ ಕೈಂಕರ್ಯಗಳು ಚಾಲನೆ ಪಡೆದುಕೊಂಡಿದ್ದು ದೇವರ ಉತ್ಸವ ಮೂರ್ತಿಗಳಿಗೆ ಅಭಿಷೇಕ ನೆರವೇರಿಸಿ ಭಕ್ತರ ಮನೆಗಳಿಗೆ ತೆರಳಿ ವಿಶೇಷ ಪೂಜೆ ಸಲ್ಲಿಕೆಯಾದ ನಂತರ ಮಧ್ಯಾಹ್ನ 1 ಗಂಟೆಗೆ ದೇವರನ್ನು ರಥಕ್ಕೆ ಕೂರಿಸಲಾಯಿತು. ರಥದ ಗಾಲಿಗಳು ಮುಂದಕ್ಕೆ ಚಲಿಸುತ್ತಿದ್ದಂತೆ ನೆರೆದಿದ್ದ ಭಕ್ತರ ಹರ್ಷೋದ್ಗಾರ ಮುಗಿಲು ಮುಟ್ಟಿ ರಥಕ್ಕೆ ಹೂ, ಬಾಳೆಹಣ್ಣು, ದವನ ಎಸೆದು ಹರಕೆ ತೀರಿಸಿದರು.
ಜಾತ್ರೆಯ ಪ್ರಯುಕ್ತ ಮಾರ್ಚ್ 18ಕ್ಕೆ ಸೂರ್ಯಮಂಡಲೋತ್ಸವ, ಬೆಳ್ಳಿ ಪಲ್ಲಕ್ಕಿ ಉತ್ಸವ, ಅಶ್ವವಾಹನೋತ್ಸವ, ಮಾರ್ಚ್ 19ಕ್ಕೆ ತೀರ್ಥಸ್ನಾನ, ಉಯ್ಯಾಲೋತ್ಸವ, ಚಿತ್ರಗೋಪು ರೋತ್ಸವ, ಜಲಕ್ರೀಡೆ ಉತ್ಸವ, ಮಾರ್ಚ್ 20ಕ್ಕೆ ದವನೋತ್ಸವ, 21ಕ್ಕೆ ಉಯ್ಯಾಲೋತ್ಸವ, ಹನುಮಂತೋತ್ಸವ, ಶಯನೋತ್ಸವ, ಮಾರ್ಚ್ 22ಕ್ಕೆ ಗರುಡೋತ್ಸವದೊಂದಿಗೆ ಪೂಜಾ ಕಾರ್ಯಗಳು ಮುಗಿಯಲಿದೆ.
ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ, ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಚನ್ನಬಸಪ್ಪ, ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಟಿ.ಸುನೀಲ್‍ಕುಮಾರ್ ಭಾಗವಹಿಸಿದ್ದರು. ಪ್ರಧಾನ ಅರ್ಚಕರಾದ ವೆಂಕಟರಾಜ್ ಭಟ್ಟ, ಆಗಮಿಕರಾದ ಟಿ.ಕೆ.ವಾಸುದೇವ್ ಉಪಸ್ಥಿತರಿದ್ದರು.