Belthangadi (Dakshina Kannada): ಧರ್ಮಸ್ಥಳ ಬುರುಡೆ ಪ್ರಕರಣದ ದೂರುದಾರನಾದ ಚಿನ್ನಯ್ಯ, ಈಗ ನ್ಯಾಯಾಂಗ ಬಂಧನದಲ್ಲಿದ್ದು, ಆತ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಬೆಳ್ತಂಗಡಿ ನ್ಯಾಯಾಲಯ ತಿರಸ್ಕರಿಸಿದೆ.
ಆಗಸ್ಟ್ 23ರಂದು ವಿಶೇಷ ತನಿಖಾ ತಂಡ (SIT) ಚಿನ್ನಯ್ಯನನ್ನು ಬಂಧಿಸಿತ್ತು. ಪ್ರಸ್ತುತ ಅವನು ಶಿವಮೊಗ್ಗ ಜೈಲಿನಲ್ಲಿದ್ದಾನೆ. ಸೆಪ್ಟೆಂಬರ್ 12ರಂದು ಜಾಮೀನು ಅರ್ಜಿಯ ವಿಚಾರಣೆ ನಡೆದಿದ್ದು, ಸೆಪ್ಟೆಂಬರ್ 16ರಂದು ನ್ಯಾಯಾಲಯ ತೀರ್ಪು ನೀಡಿತು.
ವಿಚಾರಣೆ ನಡೆಸಿದ ನ್ಯಾಯಧೀಶ ವಿಜಯೇಂದ್ರ ಟಿ.ಹೆಚ್. ಅವರು, ಪ್ರಕರಣ ಗಂಭೀರ ಸ್ವರೂಪದ್ದಾಗಿದೆ ಮತ್ತು ಇನ್ನೂ ತನಿಖೆ ಮುಂದುವರಿಯಬೇಕು ಎಂದು ಹೇಳಿ ಜಾಮೀನು ಅರ್ಜಿಯನ್ನು ವಜಾಗೊಳಿಸಿದರು.
ಬಂಧನದ ಹಿನ್ನಲೆ
- ಆಗಸ್ಟ್ 23ರಂದು ಚಿನ್ನಯ್ಯನನ್ನು SIT ವಶಕ್ಕೆ ಪಡೆದು 12 ದಿನ ಕಸ್ಟಡಿಗೆ ತೆಗೆದುಕೊಂಡಿತ್ತು.
- ನಂತರ ಮತ್ತೆ ಸೆಪ್ಟೆಂಬರ್ 3ರಂದು 3 ದಿನಗಳ ಕಸ್ಟಡಿಗೆ ನೀಡಿ, ಸೆಪ್ಟೆಂಬರ್ 6ರಂದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಯಿತು.
- ಈಗ ಆತ ಶಿವಮೊಗ್ಗ ಜೈಲಿನಲ್ಲಿ ಇದ್ದಾನೆ.
ಚಿನ್ನಯ್ಯ, ಹಿಂದಿನ ನೈರ್ಮಲ್ಯ ಕಾರ್ಮಿಕ, ಧರ್ಮಸ್ಥಳದಲ್ಲಿ ತಾನು ಹಲವಾರು ಮೃತದೇಹಗಳನ್ನು ರಹಸ್ಯವಾಗಿ ವಿಲೇವಾರಿ ಮಾಡಿದ್ದೇನೆ ಎಂದು ಪೊಲೀಸರಿಗೆ ದೂರು ನೀಡಿದ್ದ. ತನಗೆ ಮತ್ತು ಕುಟುಂಬಕ್ಕೆ ಕಾನೂನು ರಕ್ಷಣೆ ಸಿಕ್ಕರೆ, ಎಲ್ಲ ಮಾಹಿತಿಯನ್ನು ಹಾಗೂ ಸ್ಥಳಗಳನ್ನು ತೋರಿಸಲು ಸಿದ್ದನೆಂದು ಹೇಳಿದ್ದ.
ಈ ಆಧಾರದ ಮೇಲೆ ಜುಲೈ 4ರಂದು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಯಿತು. ನಂತರ ರಾಜ್ಯ ಸರ್ಕಾರವು SIT ರಚಿಸಿ, ಚಿನ್ನಯ್ಯ ಗುರುತಿಸಿದ್ದ 13 ಸ್ಥಳಗಳಲ್ಲಿ ತನಿಖೆ ನಡೆಸಿತು. ಬಳಿಕ ಆಗಸ್ಟ್ 23ರಂದು ಅವನನ್ನು ಬಂಧಿಸಲಾಯಿತು.