Delhi: ಬುಡಕಟ್ಟು ಯುವಕರ ಅಭಿವೃದ್ಧಿಗೆ ಕೇಂದ್ರ ಸರ್ಕಾರ (Central Government) ಮಹತ್ವದ ಹೆಜ್ಜೆ ಇಟ್ಟಿದೆ. ಛತ್ತೀಸ್‌ಗಢ, ಜಾರ್ಖಂಡ್, ಮಧ್ಯಪ್ರದೇಶ ಮತ್ತು ಒಡಿಶಾದ 76 ಏಕಲವ್ಯ ಮಾದರಿ ವಸತಿ ಶಾಲೆಗಳ ಮೂಲಸೌಕರ್ಯ ಮತ್ತು ಸಾಮರ್ಥ್ಯ ವೃದ್ಧಿಗಾಗಿ ಬುಡಕಟ್ಟು ವ್ಯವಹಾರಗಳ ಸಚಿವಾಲಯ ಮತ್ತು ಕೋಲ್ ಇಂಡಿಯಾ ಲಿಮಿಟೆಡ್ ಇಂದು ಒಪ್ಪಂದಕ್ಕೆ ಸಹಿ ಹಾಕಿವೆ. ಇದರಿಂದ ಈ ಪ್ರದೇಶಗಳಲ್ಲಿ ಕಲಿಯುತ್ತಿರುವ 30,000ಕ್ಕೂ ಹೆಚ್ಚು ಬುಡಕಟ್ಟು ಮಕ್ಕಳಿಗೆ ಉತ್ತಮ ಅವಕಾಶ ಸಿಗಲಿದೆ.
ಕೋಲ್ ಇಂಡಿಯಾ ಲಿಮಿಟೆಡ್ ಮತ್ತು ರಾಷ್ಟ್ರೀಯ ಪರಿಶಿಷ್ಟ ಪಂಗಡಗಳ ಆರ್ಥಿಕ ಮತ್ತು ಅಭಿವೃದ್ಧಿ ಮಂಡಳಿಯ ನಡುವೆ MoU (ತಿಳುವಳಿಕೆ ಒಪ್ಪಂದ) ಸಹಿ ಹಾಕಲಾಯಿತು. ಈ ಸಂದರ್ಭದಲ್ಲಿ ಕೇಂದ್ರ ಬುಡಕಟ್ಟು ವ್ಯವಹಾರಗಳ ಸಚಿವ ಜುಯೆಲ್ ಒರಾನ್ ಮತ್ತು ಕೇಂದ್ರ ಕಲ್ಲಿದ್ದಲು ಮತ್ತು ಗಣಿ ಸಚಿವ ಜಿ. ಕಿಶನ್ ರೆಡ್ಡಿ ಉಪಸ್ಥಿತರಿದ್ದರು. ದೇಶಾದ್ಯಂತ 479 EMRSs ಕಾರ್ಯನಿರ್ವಹಿಸುತ್ತಿದ್ದು, ಪರಿಶಿಷ್ಟ ಪಂಗಡದ ಮಕ್ಕಳಿಗೆ ಉತ್ತಮ ಶಿಕ್ಷಣ, ಆರೋಗ್ಯ ರಕ್ಷಣೆ ಮತ್ತು ಒಟ್ಟಾರೆ ಅಭಿವೃದ್ಧಿ ಸಾಧ್ಯತೆಗಳನ್ನು ಒದಗಿಸುತ್ತಿವೆ.
ಸಿಎಸ್ಆರ್ (ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ) ವ್ಯಾಪ್ತಿಯಲ್ಲಿ CIL, 76 ಶಾಲೆಗಳಲ್ಲಿ ಈ ಕೆಳಗಿನ ಸೌಲಭ್ಯಗಳನ್ನು ಒದಗಿಸುತ್ತದೆ.
- 1,200 ಕಂಪ್ಯೂಟರ್‌ಗಳು ಮತ್ತು 1,200 UPS ಘಟಕಗಳು
- 110 ಟ್ಯಾಬ್ಲೆಟ್‌ಗಳು
- 420 ಸ್ಯಾನಿಟರಿ ಪ್ಯಾಡ್ ವೆಂಡಿಂಗ್ ಯಂತ್ರಗಳು
- 420 ಸ್ಯಾನಿಟರಿ ಪ್ಯಾಡ್ ಇನ್ಸಿನರೇಟರ್‌ಗಳು
- 10 ಮತ್ತು 12ನೇ ತರಗತಿಗಳ 6,200ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ವೃತ್ತಿ ಸಮಾಲೋಚನೆ ಮತ್ತು ಮಾರ್ಗದರ್ಶನ
CIL ಈ ಯೋಜನೆಗಾಗಿ 10 ಕೋಟಿ ರೂ. ಹೂಡಿಕೆ ಮಾಡಿದೆ. ಕೇಂದ್ರ ಕಲ್ಲಿದ್ದಲು ಮತ್ತು ಗಣಿ ಸಚಿವ ಜಿ. ಕಿಶನ್ ರೆಡ್ಡಿ ಹೇಳಿದರು, “ಈ ಸಹಯೋಗದಿಂದ ಶಿಕ್ಷಣ, ಆರೋಗ್ಯ, ಮಹಿಳಾ ಸಬಲೀಕರಣ ಮತ್ತು ಗ್ರಾಮೀಣ ಅಭಿವೃದ್ಧಿ ಕ್ಷೇತ್ರಗಳಲ್ಲಿ ಪರಿಣಾಮಕಾರಿ ಕೆಲಸ ಸಾಧ್ಯವಾಗುತ್ತದೆ.”
ಯೋಜನೆಯ ಉದ್ದೇಶಗಳು
- STEM (ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್, ಗಣಿತ) ವಿಷಯದಲ್ಲಿ ಡಿಜಿಟಲ್ ಕಲಿಕೆಯನ್ನು ಉತ್ತೇಜಿಸಲು ಕಂಪ್ಯೂಟರ್ ಲ್ಯಾಬ್‌ಗಳು ಸ್ಥಾಪಿಸುವುದು
- ಮಕ್ಕಳ ಆರೋಗ್ಯ ಮತ್ತು ನೈರ್ಮಲ್ಯವನ್ನು ಉತ್ತೇಜಿಸುವುದು
- ಬುಡಕಟ್ಟು ವಿದ್ಯಾರ್ಥಿಗಳಿಗೆ ಸಮಾನ ಮಾರ್ಗದರ್ಶನ ಮತ್ತು ಅವಕಾಶಗಳನ್ನು ಒದಗಿಸುವುದು
ಈ ಯೋಜನೆ ಮೂಲಕ ಬುಡಕಟ್ಟು ಮಕ್ಕಳಿಗೆ ವಿದ್ಯಾಭ್ಯಾಸ ಮತ್ತು ಭವಿಷ್ಯದ ಉದ್ಯೋಗದ ಮಾರ್ಗವನ್ನು ಸುಗಮಗೊಳಿಸಲು ಕೇಂದ್ರ ಸರ್ಕಾರ ಪ್ರಯತ್ನಿಸುತ್ತಿದೆ.