Doddaballapura : ದೊಡ್ಡಬಳ್ಳಾಪುರ ನಗರದ ತಾಲ್ಲೂಕು ಪಂಚಾಯಿತಿ ಕಚೇರಿ ಆವರಣದಲ್ಲಿ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ (NREGS) ರೋಜ್‌ಗಾರ್ ಪ್ರಚಾರ ವಾಹಿನಿ (Rojgar Prachar Vahini) ಉದ್ಯೋಗ ರಥಕ್ಕೆ ಜಿಲ್ಲಾ ಮುಖ್ಯ ಯೋಜನಾಧಿಕಾರಿ ಎಂ.ಆರ್. ನರಸಿಂಹ ಹಸಿರು ನಿಶಾನೆ ತೋರಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಉದ್ಯೋಗ ಖಾತರಿ ಯೋಜನೆಯಡಿ 2021-22ನೇ ಸಾಲಿನ ಕಾರ್ಮಿಕ ಆಯವ್ಯಯ ತಯಾರಿಕೆ ಪ್ರಕ್ರಿಯೆ ಪ್ರಾರಂಭವಾಗಿದ್ದು ರೈತರು, ಸಾರ್ವಜನಿಕರು ತಮಗೆ ಅವಶ್ಯವಿರುವ ವೈಯಕ್ತಿಕ ಕಾಮಗಾರಿ ಬೇಡಿಕೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಈ ಉದ್ಯೋಗ ವಾಹಿನಿ ರಥ ಏಳು ದಿನಗಳ ಕಾಲ ತಾಲ್ಲೂಕಿನ ಪ್ರತಿಯೊಂದು ಗ್ರಾಮಗಳಿಗೂ ಸಂಚರಿಸಿ ಸಾರ್ವಜನಿಕರು, ರೈತರಿಗೆ ಉದ್ಯೋಗ ಖಾತರಿ ಯೋಜನೆ ಕುರಿತು ಮಾಹಿತಿ ನೀಡಲಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು. ಪ್ರತಿಯೊಂದು ಗ್ರಾಮ ಪಂಚಾಯಿತಿಗಳಲ್ಲಿ ಕಾಮಗಾರಿ ಬೇಡಿಕೆಯ ಪೆಟ್ಟಿಗೆಯನ್ನು ಇಡಲಿದ್ದು ಈ ಪೆಟ್ಟಿಗೆಯಲ್ಲಿ ಗ್ರಾಮಸ್ಥರು ತಮಗೆ ಬೇಕಾದ ಕಾಮಗಾರಿಯ ಪಟ್ಟಿಯ ಚೀಟಿಯಲ್ಲಿ ಬರೆದು ಹಾಕಬೇಕು. ಕೊನೆಗೆ ಪೆಟ್ಟಿಗೆಯಲ್ಲಿ ಬಂದ ಚೀಟಿಗಳನ್ನು ಆಧರಿಸಿ ರೈತರಿಗೆ ಅನುಕೂಲವಾಗುವ ರೀತಿಯಲ್ಲಿ ಕ್ರಿಯಾಯೋಜನೆ ತಯಾರಿಸಲಾಗುವುದು ಎಂದು ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಸಿ.ಎಸ್. ಶ್ರೀನಾಥ್‌ಗೌಡ ತಿಳಿಸಿದರು.
ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಮುನಿಕೃಷ್ಣಪ್ಪ, ಸಹಾಯಕ ನಿರ್ದೇಶಕ ತಿರುಪತಿ, ಐಇಸಿ ಸಂಯೋಜಕ ಚಂದ್ರಶೇಖರ್ ಸೇರಿದಂತೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ತಾಲ್ಲೂಕು ಸಿಬ್ಬಂದಿ ಉಪಸ್ಥಿತರಿದ್ದರು.