ಮಾಸ್ಕೋದಲ್ಲಿ ಗುರುವಾರ, ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ (NSA) ಅಜಿತ್ ದೋವಲ್ ಅವರು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Doval-Putin) ಅವರನ್ನು ಭೇಟಿ ಮಾಡಿದರು.
ಪುಟಿನ್ ಭೇಟಿಗೆ ಮುನ್ನ, ದೋವಲ್ ರಷ್ಯಾ ಭದ್ರತಾ ಮಂಡಳಿಯ ಕಾರ್ಯದರ್ಶಿ ಸೆರ್ಗೆಯ್ ಶೋಯಿಗು ಅವರೊಂದಿಗೆ ದ್ವಿಪಕ್ಷೀಯ ಇಂಧನ ಮತ್ತು ರಕ್ಷಣಾ ಸಹಕಾರ ಕುರಿತು ಚರ್ಚೆ ನಡೆಸಿದರು. ಈ ಮಾತುಕತೆ ಪುಟಿನ್ ಅವರ ಮುಂದಿನ ಭಾರತ ಭೇಟಿಗೆ ವೇದಿಕೆ ಸಿದ್ಧಪಡಿಸುವ ಉದ್ದೇಶ ಹೊಂದಿತ್ತು.
ರಷ್ಯಾದಿಂದ ತೈಲ ಖರೀದಿಸಿದ್ದಕ್ಕಾಗಿ, ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತದಿಂದ ಬರುವ ಸರಕುಗಳ ಮೇಲೆ ಮೊದಲು 25% ಸುಂಕ ವಿಧಿಸಿ, ಬಳಿಕ ಅದನ್ನು 50% ಕ್ಕೆ ಹೆಚ್ಚಿಸಿದ್ದಾರೆ. ಇದೇ ದಿನ ದೋವಲ್ ರಷ್ಯಾ ಭೇಟಿಯನ್ನು ಪ್ರಾರಂಭಿಸಿದರು.
ಮೂಲಗಳ ಪ್ರಕಾರ, ಆಗಸ್ಟ್ ಅಂತ್ಯದಲ್ಲಿ ಪುಟಿನ್ ಭಾರತಕ್ಕೆ ಬರಬಹುದೆಂಬ ಸುದ್ದಿ ಹರಿದಾಡುತ್ತಿದ್ದರೂ, ದೋವಲ್ ಯಾವುದೇ ದಿನಾಂಕವನ್ನು ದೃಢಪಡಿಸಿಲ್ಲ. ಆದರೆ ಪುಟಿನ್ ಈ ವರ್ಷ ಭಾರತಕ್ಕೆ ವಾರ್ಷಿಕ ಶೃಂಗಸಭೆಗಾಗಿ ಬರುವ ನಿರೀಕ್ಷೆಯಿದೆ.
ಉಕ್ರೇನ್ ಯುದ್ಧದ ನಂತರ ಪಾಶ್ಚಿಮಾತ್ಯ ರಾಷ್ಟ್ರಗಳ ನಿರ್ಬಂಧಗಳ ನಡುವೆಯೂ, ರಷ್ಯಾ ಭಾರತಕ್ಕೆ ಪ್ರಮುಖ ಇಂಧನ ಪೂರೈಕೆದಾರವಾಗಿದೆ. ದೋವಲ್ ಭೇಟಿ ಸಂದರ್ಭದಲ್ಲಿ S-400 ವಾಯು ರಕ್ಷಣಾ ವ್ಯವಸ್ಥೆಯ ಉಳಿದ ಭಾಗಗಳನ್ನು ಭಾರತಕ್ಕೆ ಬೇಗ ತಲುಪಿಸುವ ಕುರಿತು ಚರ್ಚೆಯಾಗಿದೆ.
ಕ್ರೆಮ್ಲಿನ್ ಪ್ರಕಾರ, ಶೀಘ್ರದಲ್ಲೇ ಅಮೆರಿಕಾ ಅಧ್ಯಕ್ಷ ಟ್ರಂಪ್ ಮತ್ತು ರಷ್ಯಾ ಅಧ್ಯಕ್ಷ ಪುಟಿನ್ ನಡುವೆ ಸಭೆ ನಡೆಯಲಿದೆ. ಸ್ಥಳ ನಿಗದಿಯಾಗಿದೆ, ವಿವರಗಳನ್ನು ನಂತರ ಪ್ರಕಟಿಸಲಿದ್ದಾರೆ.
ಟ್ರಂಪ್ ಎರಡನೇ ಅವಧಿಯಲ್ಲಿ ಅಧಿಕಾರಕ್ಕೆ ಬಂದ ನಂತರದ ಇದು ಪುಟಿನ್ ಅವರೊಂದಿಗಿನ ಮೊದಲ ಭೇಟಿ. ಉಕ್ರೇನ್ ಯುದ್ಧ ಇನ್ನೂ ಮುಂದುವರಿದಿದ್ದು, ಟ್ರಂಪ್ ಅದನ್ನು ನಿಲ್ಲಿಸುವುದಾಗಿ ಘೋಷಿಸಿದ್ದಾರೆ. ಆದರೆ, ಪುಟಿನ್ ಅವರಿಂದ ಯಾವುದೇ ಸಕಾರಾತ್ಮಕ ಪ್ರತಿಕ್ರಿಯೆ ಬಂದಿಲ್ಲ.