ಇಯರ್‌ಫೋನ್ ಮತ್ತು ಹೆಡ್‌ಫೋನ್ ಗಳ (earphones and headphones) ಅತಿಯಾದ ಬಳಕೆಯಿಂದ ಶ್ರವಣದೋಷ ಉಂಟಾಗುವ ಅಪಾಯವಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ (Union Health Ministry) ಎಚ್ಚರಿಕೆ ನೀಡಿದೆ. ಈ ಸಮಸ್ಯೆ ಯುವಕರಲ್ಲಿ ಹೆಚ್ಚಾಗಿದ್ದು, ಇದರಿಂದ ಉಂಟಾಗುವ ಹಾನಿಗಳನ್ನು ತಪ್ಪಿಸಲು ರಾಜ್ಯ ಸರ್ಕಾರಗಳು ಮತ್ತು ವೈದ್ಯಕೀಯ ಕಾಲೇಜುಗಳು ಜಾಗೃತಿ ಮೂಡಿಸಬೇಕು ಎಂದು ಸೂಚನೆ ನೀಡಲಾಗಿದೆ.
ಆರೋಗ್ಯ ಸೇವೆಗಳ ಮಹಾನಿರ್ದೇಶಕ ಪ್ರೊ. ಅತುಲ್ ಗೋಯೆಲ್ ಅವರ ಪ್ರಕಾರ, ಈ ಸಾಧನಗಳ ಅತಿಯಾಗಿ ಬಳಕೆಯಿಂದ ಶ್ರವಣದೋಷ ಉಂಟಾಗುತ್ತಿದೆ. ದಿನಕ್ಕೆ 2 ಗಂಟೆ ಮೀರದಂತೆ ಮತ್ತು 50 ಡೆಸಿಬಲ್‌ಗಿಂತ ಕಡಿಮೆ ಶಬ್ದ ಮಟ್ಟದಲ್ಲಿ ಬಳಸುವುದು ಸುರಕ್ಷಿತ. ಜೊತೆಗೆ, ತಕ್ಕಮಟ್ಟಿಗೆ ವಿರಾಮ ತೆಗೆದುಕೊಳ್ಳುವುದು ಅಗತ್ಯ.
ಮಕ್ಕಳು ನಿರಂತರವಾಗಿ ಮೊಬೈಲ್ ಮತ್ತು ಟೀವಿ ನೋಡುವುದರಿಂದ ಮೆದುಳಿನ ಬೆಳವಣಿಗೆ ಮೇಲೆ ಪರಿಣಾಮ ಬೀರುತ್ತದೆ. ರಾಜ್ಯ ಸರ್ಕಾರಗಳು ಹಾಗೂ ವೈದ್ಯಕೀಯ ಕಾಲೇಜುಗಳು ಶ್ರವಣದೋಷ ಪತ್ತೆ ಮಾಡಲು ತಪಾಸಣಾ ಶಿಬಿರಗಳನ್ನು ಆಯೋಜಿಸಬೇಕು ಎಂದು ಕೇಂದ್ರ ಸರ್ಕಾರ ಸೂಚಿಸಿದೆ.
ಇಂದಿನ ಯುಗದಲ್ಲಿ ಬಹುತೇಕ ಜನರು ಹೆಡ್‌ಫೋನ್ ಬಳಸುತ್ತಿದ್ದಾರೆ. ಸುಲಭತೆ ಮತ್ತು ಖಾಸಗಿತನಕ್ಕಾಗಿ ಇದರ ಬಳಕೆ ಹೆಚ್ಚಾಗಿದೆ. ಆದರೆ, ಮಿತಿಮೀರಿದ ಬಳಕೆಯಿಂದ ಕಿವಿಯ ಒಳಭಾಗದ ಪರದೆಗೆ (ಇಯರ್ ಡ್ರಮ್) ಹಾನಿಯಾಗಬಹುದು. ಜೋರಾಗಿ ಧ್ವನಿ ಕೇಳಿದರೆ ಇದರ ಕಂಪನಗಳಿಂದ ಶಾಶ್ವತ ಕಿವುಡುತನದ ಸಾಧ್ಯತೆ ಇರುತ್ತದೆ.
ಸುರಕ್ಷಿತ ಬಳಕೆಗಾಗಿ ಸಲಹೆಗಳು
- ಅಗತ್ಯವಿದ್ದಾಗ ಮಾತ್ರ ಇಯರ್‌ಫೋನ್ ಬಳಸಿ.
- ಕಡಿಮೆ ಧ್ವನಿಯಲ್ಲಿಯೇ ಬಳಸುವುದು ಒಳಿತು.
- ಉತ್ತಮ ಗುಣಮಟ್ಟದ ಇಯರ್‌ಫೋನ್ ಆಯ್ಕೆ ಮಾಡಿಕೊಳ್ಳಿ.
- ನಿಯಮಿತ ವಿರಾಮ ತೆಗೆದುಕೊಳ್ಳುವುದು ಶ್ರವಣ ಆರೋಗ್ಯಕ್ಕೆ ಸಹಕಾರಿ.