Bengaluru: BBMP ಮುಖ್ಯ ಇಂಜಿನಿಯರ್ (BBMP Chief Engineer) ಕಚೇರಿ ಮೇಲೆ ಇಡಿ (ED) ಅಧಿಕಾರಿಗಳು ದಾಳಿ ನಡೆಸಿದ್ದು, ಪ್ರಸ್ತುತ ಪ್ರಮುಖ ಎರಡು ಪ್ರಾಜೆಕ್ಟ್ ಗಳ ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ.
ED, 2016ರಿಂದ 2019ರ ಅವಧಿಯಲ್ಲಿ ಕೊಳವೆಬಾವಿ ಕೊರೆಸಲು ಸಂಬಂಧಿಸಿದ 960 ಕೋಟಿ ರೂಪಾಯಿ ಅಕ್ರಮ ವ್ಯವಹಾರ ಮತ್ತು ವೈಟ್ ಟಾಪಿಂಗ್ ಹಗರಣದ ಬಗ್ಗೆ ವಿಚಾರಣೆ ನಡೆಸುತ್ತಿರುವುದಾಗಿ ತಿಳಿದು ಬಂದಿದೆ. 2016ರಿಂದ 2019ರವರೆಗೆ ನಡೆದ ಕೊಳವೆಬಾವಿ ಹಗರಣ ಮತ್ತು ವೈಟ್ ಟಾಪಿಂಗ್ ಅವ್ಯವಹಾರಗಳ ಕುರಿತಾದ ದಾಖಲೆಗಳನ್ನು ಇಡಿ ಅಧಿಕಾರಿಗಳು ಪರಿಶೀಲನೆ ಮಾಡುತ್ತಿದ್ದಾರೆ.
2018-19ರಲ್ಲಿ ಬೆಂಗಳೂರಿನಲ್ಲಿ ನಡೆದ ವೈಟ್ ಟಾಪಿಂಗ್ ಯೋಜನೆಗೆ ಸಂಬಂಧಿಸಿದಂತೆ ಭಾರೀ ಅಕ್ರಮ ಆರೋಪಗಳು ಕೇಳಿಬಂದಿದ್ದು, 2019ರಲ್ಲಿ ಬಿಜೆಪಿ ಶಾಸಕರ ನಿಯೋಗವು ಲೋಕಾಯುಕ್ತಕ್ಕೆ ದೂರು ನೀಡಿತ್ತು. ವೈಟ್ ಟಾಪಿಂಗ್ ಯೋಜನೆಯಲ್ಲಿ 279 ಕಿಮೀ ರಸ್ತೆ ದುರಸ್ಥಿಗೆ 3046 ಕೋಟಿ ರೂಪಾಯಿಗಳ ವೆಚ್ಚ ಮಾಡಲಾಗಿದೆ.
ಈ ಹಿಂದಿನ ವಿಚಾರಣೆಗಳನ್ನು ಮುಂದುವರೆಸಿ, ಇಡಿ ಅಧಿಕಾರಿಗಳು ಬಿಬಿಎಂಪಿ ಮುಖ್ಯ ಇಂಜಿನಿಯರ್ ಬಿಎಸ್ ಪ್ರಹ್ಲಾದ್ ಅವರೊಂದಿಗೆ ದಾಖಲೆಗಳನ್ನು ಸಂಗ್ರಹಿಸುತ್ತಿದ್ದಾರೆ.