Delhi: ಭಾರತೀಯ ಚುನಾವಣಾ ಆಯೋಗ (ECI) ಬುಧವಾರ ಹಲವು ರಾಜಕೀಯ ಪಕ್ಷಗಳ ಪ್ರತಿನಿಧಿಗಳನ್ನು ಭೇಟಿಯಾಗಿ, ಮತಯಂತ್ರ (EVM-Electronic Voting Machines), ಮತದಾರರ ಪಟ್ಟಿ ಹಾಗೂ ಚುನಾವಣೆ ಪ್ರಕ್ರಿಯೆಗಳ ಕುರಿತ ಅವರ ಪ್ರಶ್ನೆಗಳಿಗೆ ಸ್ಪಷ್ಟನೆ ನೀಡಿತು. ಈ ಸಭೆಯು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ಅಧ್ಯಕ್ಷತೆಯಲ್ಲಿ, ಆಯುಕ್ತರಾದ ಸುಖ್ಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ಉಪಸ್ಥಿತಿಯಲ್ಲಿ ನಡೆಯಿತು.
ಸಭೆಯಲ್ಲಿ ಪಕ್ಷಗಳು ತಮ್ಮ ಅಹವಾಲುಗಳನ್ನು ವಿಸ್ತಾರವಾಗಿ ಪ್ರಸ್ತುತಪಡಿಸಿತು. ಆಯೋಗವು ಪ್ರತಿ ಪ್ರಶ್ನೆಯನ್ನು ತಾಳ್ಮೆಯಿಂದ ಆಲಿಸಿ, ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಯಾದ Special Intense Revision (SIR) ಅನ್ನು ಡಿಕೋಡ್ ಮಾಡಿ ವಿವರಿಸಿತು. ಬಿಹಾರದಲ್ಲಿ ಮುಂಬರುವ ವಿಧಾನಸಭೆ ಚುನಾವಣೆಗಳನ್ನು ನಿಷ್ಪಕ್ಷಪಾತವಾಗಿ ನಡೆಸುವ ಉದ್ದೇಶದಿಂದ ಈ ಸಕಾಲದಲ್ಲಿ ಚಟುವಟಿಕೆಗಳನ್ನು ಪ್ರಾರಂಭಿಸಲಾಗಿದೆ.
ಕಾಂಗ್ರೆಸ್, ರಾಷ್ಟ್ರೀಯ ಜನತಾ ದಳ, ಸಮಾಜವಾದಿ ಪಕ್ಷ, ಡಿಎಂಕೆ, ಎನ್‌ಸಿಪಿ (ಶರದ್ ಪವಾರ್), ಜಾರ್ಖಂಡ್ ಮುಕ್ತಿ ಮೋರ್ಚಾ, ಸಿಪಿಎಂ, ಸಿಪಿಐ, ಸಿಪಿಐ(ಎಂಎಲ್)- ಲಿಬರೇಶನ್, ಶಿವಸೇನೆ (ಉದ್ಧವ್ ಬಾಳಾಸಾಹೇಬ್ ಠಾಕ್ರೆ) ಮತ್ತಿತರ ಪಕ್ಷಗಳು ಸಭೆಯಲ್ಲಿ ಭಾಗವಹಿಸಿವೆ.
ಸಮಗ್ರ ಮತದಾರರ ನೋಂದಣಿ ಮಾಡಲು, ಹಂತ ಹಂತವಾಗಿ SIR ಪ್ರಕ್ರಿಯೆ ಜಾರಿಯಲ್ಲಿದೆ. ಬಿಹಾರದಾದ್ಯಂತ 1.54 ಲಕ್ಷ ಬೂತ್ ಮಟ್ಟದ ಏಜೆಂಟುಗಳು (BLA) ಈ ಕಾರ್ಯದಲ್ಲಿ ತೊಡಗಿದ್ದಾರೆ. ಇವರು ಪ್ರಕ್ರಿಯೆಯ ಪಾರದರ್ಶಕತೆಗೆ ನೆರವಾಗುತ್ತಿದ್ದಾರೆ.
ಹೆಚ್ಚಿನ ಮತದಾರರ ನೋಂದಣಿಗೆ ಎಲ್ಲ ರಾಜಕೀಯ ಪಕ್ಷಗಳು ಇನ್ನಷ್ಟು BLAಗಳನ್ನು ನೇಮಕ ಮಾಡಬೇಕೆಂದು ಮುಖ್ಯ ಆಯುಕ್ತ ಮನವಿ ಮಾಡಿದರು. ಪ್ರಥಮ ಹಂತದಲ್ಲಿ, ಜೂನ್ 25 ರಿಂದ ಜುಲೈ 3ರ ವರೆಗೆ EF forms ಅನ್ನು 7.90 ಕೋಟಿ ಮತದಾರರಿಗೆ ವಿತರಿಸಲಾಗುತ್ತಿದೆ. BLOಗಳ (ಬೂತ್ ಮಟ್ಟದ ಅಧಿಕಾರಿಗಳು) ಸಹಾಯದಿಂದ ಈ ಕೆಲಸ ನಡೆಯುತ್ತಿದೆ.
24 ಜೂನ್ 2025ರಿಂದ BLOಗಳು ಮನೆ ಮನೆಗೆ ತೆರಳಿ ನಮೂನೆಗಳನ್ನು ತಲುಪಿಸುತ್ತಿದ್ದಾರೆ. ಇವುಗಳ ಡೌನ್‌ಲೋಡ್ ವ್ಯವಸ್ಥೆಯೂ ಅಂತರ್ಜಾಲದಲ್ಲಿ ಲಭ್ಯ. ಪ್ರತಿ BLA ದಿನಕ್ಕೆ 50 ನಮೂನೆಗಳವರೆಗೆ ಸಲ್ಲಿಸಲು ಅವಕಾಶವಿದೆ. ಎರಡನೇ ಹಂತದ ನಮೂನೆಗಳ ಭರ್ತಿ ಜುಲೈ 25ರೊಳಗೆ ಪೂರ್ಣಗೊಳ್ಳಬೇಕಾಗಿದೆ.
ಇದಕ್ಕಾಗಿ 4 ಲಕ್ಷಕ್ಕೂ ಹೆಚ್ಚು ಸ್ವಯಂಸೇವಕರನ್ನು ನೇಮಕ ಮಾಡಲಾಗಿದ್ದು, ಹಿರಿಯರು, ಅಂಗವಿಕಲರು, ಬಡವರು ಮತ್ತು ಅನಾರೋಗ್ಯ ಪೀಡಿತರಿಗೆ ಸಹಾಯ ಮಾಡಲಿದ್ದಾರೆ ಎಂದು ಆಯೋಗ ಸ್ಪಷ್ಟಪಡಿಸಿದೆ.