Raipur: ಛತ್ತೀಸ್‌ಗಢದ (Chhattisgarh) ಕೊಂಟಾ ಪ್ರದೇಶದಲ್ಲಿ ಭದ್ರತಾ ಪಡೆಗಳು ನಡೆಸಿದ ಎನ್ಕೌಂಟರ್‌ನಲ್ಲಿ (encounter with security forces) ಹತ್ತು ಮಾವೋವಾದಿಗಳು ಹತ್ಯೆಗೀಡಾಗಿದ್ದಾರೆ. ಮುಂಜಾನೆ ಭೇಜ್ಜಿ ಪ್ರದೇಶದಲ್ಲಿ ಈ ಎನ್ಕೌಂಟರ್ ನಡೆದಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಕಿರಣ್ ಚವಾಣ್ ತಿಳಿಸಿದ್ದಾರೆ.
ನಕ್ಸಲರು ಒಡಿಶಾ ಮೂಲಕ ಛತ್ತೀಸ್‌ಗಢ ಪ್ರವೇಶಿಸುತ್ತಿದ್ದಾರೆ ಎಂಬ ಗುಪ್ತಚರ ಮಾಹಿತಿ ಮೇರೆಗೆ, ಜಿಲ್ಲಾಸುಪ್ತ ಮೀಸಲು ಪಡೆ (District Reserve Group-DRG) ಕಾರ್ಯಾಚರಣೆ ನಡೆಸಿದಾಗ 10 ನಕ್ಸಲರು ಭದ್ರತಾ ಪಡೆಗಳ ಗುಂಡಿಗೆ ಬಲಿಯಾಗಿದ್ದಾರೆ. ಕಾರ್ಯಾಚರಣೆ ಇನ್ನೂ ಮುಂದುವರಿಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಾರ್ಯಾಚರಣೆ ನಡೆಸಿದ ಸ್ಥಳದಲ್ಲಿ ಭದ್ರತಾ ಪಡೆಗಳು ಮೂರು ಸ್ವಯಂಚಾಲಿತ ಬಂದೂಕುಗಳು ಸೇರಿದಂತೆ ಹಲವು ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿವೆ. ಕಾರ್ಯಾಚರಣೆಯ ವೇಳೆ ಗಾಯಗೊಂಡವರ ವಿವರಗಳು ತಿಳಿದು ಬರಬೇಕಿದೆ.
ಕಳೆದ ತಿಂಗಳು ಛತ್ತೀಸ್‌ಗಢದ ನಾರಾಯಣಪುರ-ದಂತೇವಾಡ ಅರಣ್ಯದಲ್ಲಿ ಭದ್ರತಾ ಪಡೆಗಳು 31 ಮಾವೋವಾದಿಗಳನ್ನು ಹೊಡೆದುರುಳಿಸಿದ್ದರು. ಈ ಕಾರ್ಯಾಚರಣೆಯಲ್ಲಿ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿತ್ತು.