Bengaluru: ಪ್ರತ್ಯಕ್ಷ ಸಾಕ್ಷಿಯೊಬ್ಬ ಕೊಲೆಯಾದವನ ನಿಕಟ ಸಂಬಂಧಿ ಎಂಬ ಕಾರಣಕ್ಕೆ ಆ ಸಾಕ್ಷ್ಯವನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ ಎಂದು ಅಭಿಪ್ರಾಯ ಪಟ್ಟಿರುವ ಹೈಕೋರ್ಟ್,(High Court) ಕೊಲೆ ಪ್ರಕರಣದಲ್ಲಿ ಮೃತನ ತಂದೆ ಹಾಗೂ ಸಹೋದರನ ಸಾಕ್ತ ಆಧರಿಸಿ ಇಬ್ಬರಿಗೆ ವಿಧಿಸಲಾಗಿದ್ದ ಜೀವಾವಧಿ ಶಿಕ್ಷೆಯನ್ನು ಎತ್ತಿಹಿಡಿದಿದೆ.
ಕೊಲೆ ಪ್ರಕರಣದಲ್ಲಿ ಒಬ್ಬ ಪ್ರತ್ಯಕ್ಷ ಸಾಕ್ಷಿ, (eyewitness) ಸತ್ತವರ ಕುಟುಂಬದ ಸದಸ್ಯನಾಗಿರುವ ಮಾತ್ರಕ್ಕೆ ಅಂತಹ ಸಾಕ್ಷಿಯ ಸಾಕ್ಷ್ಯವನ್ನು ತಿರಸ್ಕರಿಸಲಾಗುವುದಿಲ್ಲ. ಸತ್ತವರ ನಿಕಟ ಸಂಬಂಧಿಯಾಗಿರುವ ಪ್ರತ್ಯಕ್ಷದರ್ಶಿಯ ಸಾಕ್ಷ್ಯವು ಸಮಂಜಸ, ನಂಬಲರ್ಹ ಮತ್ತು ವಿಶ್ವಾಸಾರ್ಹವಾಗಿದ್ದರೆ, ಅದನ್ನು ಪರಿಗಣಿಸಬಹುದು ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಪ್ರಕರಣದ ವಿವರ
ವಿಜಯಪುರದ (Vijayapura) ಕನ್ನೂರು ಗ್ರಾಮದಲ್ಲಿ 5 ಎಕರೆ ಭೂಮಿಯನ್ನು ಮಲ್ಲಪ್ಪ ಬರಕಡೆ ಎಂಬುವವರು ಕಾಮಣ್ಣನ ಸಂಬಂಧಿ ರುದ್ರಪ್ಪ ಅವರಿಂದ ಖರೀದಿಸಿದ್ದರು.
ಈ ಜಮೀನನ್ನು ಹಿಂದಿರುಗಿಸಬೇಕೆಂಬ ಕಾಮಣ್ಣನ ಒತ್ತಾಯಕ್ಕೆ ಮಲ್ಲಪ್ಪ ನಿರಾಕರಿಸಿದ್ದರು. ಮಲ್ಲಪ್ಪನ ಬೆಂಬಲಕ್ಕೆ ಸಹೋದರ ಅಮಸಿದ್ದ ಬರಕಡೆ ನಿಂತಿದ್ದರು. ಇದರಿಂದ ಕೋಪಗೊಂಡ ಕಾಮಣ್ಣ ಮತ್ತು ಇತರೆ ಆರೋಪಿಗಳು 2013ರ ಸೆ.19ರಂದು ಸಂಜೆ ತನ್ನ ಜಮೀನಿನಲ್ಲಿದ್ದ ಅಮರಸಿದ್ದ ಬರಕಡೆಯನ್ನು ಕೊಲೆಗೈದಿದ್ದರು.
ಮೃತನ ತಂದೆ ಶಂಕರಪ್ಪ ನೀಡಿದ ದೂರು ಆಧರಿಸಿ ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆ ಪೊಲೀಸರು (Rural Police Station) ತನಿಖೆ ನಡೆಸಿ ಕೊಲೆ ಅಪರಾಧದಡಿ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ಆರೋಪಿಗಳ ಪರ ವಕೀಲರು, ದೂರುದಾರ ಮತ್ತು ಆತನ ಮತ್ತೊಬ್ಬ ಪುತ್ರನನ್ನು ಪ್ರಕರಣದ ಪ್ರತ್ಯಕ್ಷ ದರ್ಶಿಗಳು/ಸಾಕ್ಷಿಗಳಾಗಿ ಪರಿಗಣಿಸಲಾಗಿದೆ. ಪ್ರಾಸಿಕ್ಯೂಷನ್ ವಾದ ಬೆಂಬಲಿಸಿದ ಪ್ರತ್ಯಕ್ಷ ದರ್ಶಿಗಳು ಪ್ರಕರಣದಲ್ಲಿ ಆಸಕ್ತ ಸಾಕ್ಷಿಗಳಾಗಿದ್ದಾರೆ.
ಪ್ರತ್ಯಕ್ಷ ದರ್ಶಿಗಳು ಸಹ ತಮ್ಮ ಸಾಕ್ಷ್ಯದಲ್ಲಿ ಘಟನೆ ಸ್ಥಳದಲ್ಲಿ ಕಾಮಣ್ಣ ಮತ್ತು ಸೋಮಲಿಂಗ ಇದ್ದರು ಎಂಬುದಾಗಿ ಎಲ್ಲಿಯೂ ಹೇಳಿಲ್ಲ. ಅವರು ನುಡಿದ ಸಾಕ್ಷ್ಯ ಸಹ ತದ್ವಿರುದ್ದವಾಗಿದೆ. ಅದನ್ನು ಪರಿಗಣಿಸದೆ ಮತ್ತು ಮೃತನ ಕುಟುಂಬದವರ ಸಾಕ್ಷ್ಯ ಆಧರಿಸಿ ವಿಚಾರಣಾ ನ್ಯಾಯಾಲಯವು ಆರೋಪಿಗಳಿಗೆ ಶಿಕ್ಷೆ ವಿಧಿಸಿರುವುದು ದೋಷಪೂರಿತವಾಗಿದೆ. ಆದ್ದರಿಂದ ಆರೋಪಿಗಳನ್ನು ದೋಷಮುಕ್ತ ಗೊಳಿಸುವಂತೆ ಕೋರಿದ್ದರು.