New Delhi: ಭಾರತದ ವಿದೇಶೀ ಬಂಡವಾಳ ಹೂಡಿಕೆ ಹೆಚ್ಚುತ್ತಿರುವ ಹೊತ್ತಲ್ಲೇ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಸ್ಪಷ್ಟ ಸಂದೇಶವೊಂದನ್ನು ರವಾನಿಸಿದ್ದಾರೆ. ವಿದೇಶೀ ನೇರ ಹೂಡಿಕೆಗಳನ್ನು (Foreign Direct Investments-FDI) ಕಣ್ಮುಚ್ಚಿ ಸ್ವೀಕರಿಸಲು ಆಗಲ್ಲ.
ದೇಶದ ಹಿತಾಸಕ್ತಿ ಮೊದಲ ಆದ್ಯತೆಯಾಗಿರುತ್ತದೆ. ಅದರಲ್ಲೂ ಮುಖ್ಯವಾಗಿ ತಂತ್ರಾತ್ಮಕವಾಗಿ ಸೂಕ್ಷ್ಮ ಪ್ರದೇಶದಲ್ಲಿ ದೇಶ ಇರುವುದರಿಂದ ಎಚ್ಚರದಿಂದಿರುವುದು ಅವಶ್ಯ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಮೊನ್ನೆ (ಅ. 22) ಅಮೆರಿಕದ ವಾರ್ಟನ್ ಬಿಸಿನೆಸ್ ಸ್ಕೂಲ್ನಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದ ಎನ್ ಸೀತಾರಾಮನ್, ತಮ್ಮ ದೇಶಕ್ಕೆ ಉದ್ದಿಮೆ ಬೇಕು, ಹೂಡಿಕೆ ಬೇಕು.
ಹಾಗಂತ ಎಲ್ಲಾ ಭದ್ರತೆಗಳನ್ನು ಗಾಳಿಗೆ ತೂರಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ನಮಗೆ ಬಿಸಿನೆಸ್ ಬೇಕು, ಹೂಡಿಕೆ ಬೇಕು ಎಂಬುದು ಹೌದು. ಆದರೆ, ಬಹಳ ಬಹಳವೇ ಸೂಕ್ಷ್ಮವಾಗಿರುವ ಪ್ರದೇಶದಲ್ಲಿ ಭಾರತ ಇರುವುದರಿಂದ ಒಂದಷ್ಟು ಸುರಕ್ಷತೆಗಳ ಬಗ್ಗೆಯೂ ಗಮನ ಕೊಡಬೇಕಾಗುತ್ತದೆ. ಇದೊಂದು ವಿಷಯ ಬಿಟ್ಟರೆ FDI ಅನ್ನು ಸ್ವಾಗತಿಸುತ್ತೇವೆ’ ಎಂದು ಕೇಂದ್ರ ಹಣಕಾಸು ಸಚಿವೆ ವಿವರಿಸಿದ್ದಾರೆ.
2047ರೊಳಗೆ ಮುಂದುವರಿದ ದೇಶವನ್ನಾಗಿ ಮಾಡುವ ಗುರಿ ಹೊಂದಿರುವ ಸರ್ಕಾರ ಈ ನಿಟ್ಟಿನಲ್ಲಿ ಇನ್ಫ್ರಾಸ್ಟ್ರಕ್ಚರ್, ಇನ್ವೆಸ್ಟ್ಮೆಂಟ್, ಇನ್ನೋವೇಶನ್ ಮತ್ತು ಇನ್ಕ್ಲೂಸಿವ್ನೆಸ್, ಈ ನಾಲ್ಕು ಕ್ಷೇತ್ರಗಳನ್ನು ಗುರುತಿಸಿದೆ ಎಂದು ಹಣಕಾಸು ಸಚಿವೆ ಮಾಹಿತಿ ನೀಡಿದ್ದಾರೆ.
ಸೇತುವೆ, ಬಂದರು, ಡಿಜಿಟಲ್ ಇತ್ಯಾದ ಬಹಳ ಮುಖ್ಯವಾಗಿರುವ ಭೌತಿಕ ಸೌಕರ್ಯಗಳ ಯೋಜನೆ ರೂಪಿಸುವುದು. ಇವುಗಳಿಗೆ ಬಂಡವಾಳ ವ್ಯವಸ್ಥೆ ಮಾಡುವುದು. ದೇಶದ ಸಮಸ್ಯೆ ಮತ್ತು ಸವಾಲುಗಳಿಗೆ ನವೀನ ಪರಿಹಾರಗಳನ್ನು ಒದಗಿಸುವುದು ಮೂರನೇ ಅಂಶ.
ಹಾಗೆಯೇ, ಈ ಅಭಿವೃದ್ಧಿಯ ಫಲವು ಎಲ್ಲರಿಗೂ ಸಿಗುವಂತೆ ನೋಡಿಕೊಳ್ಳುವುದು ನಾಲ್ಕನೇ ಮುಖ್ಯ ಅಂಶ ಎಂದು ನಿರ್ಮಲಾ ಸೀತಾರಾಮನ್ ಮಾಹಿತಿ ನೀಡಿದ್ದಾರೆ.