
Islamabad: ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ (Former Pakistani Prime Minister Imran Khan) ಅವರನ್ನು ಎರಡನೇ ಬಾರಿಗೆ ನೊಬೆಲ್ ಶಾಂತಿ ಪ್ರಶಸ್ತಿಗೆ (Nobel Peace Prize) ನಾಮನಿರ್ದೇಶನ ಮಾಡಲಾಗಿದೆ. ಪಾಕಿಸ್ತಾನದಲ್ಲಿ ಮಾನವ ಹಕ್ಕುಗಳು ಮತ್ತು ಪ್ರಜಾಪ್ರಭುತ್ವವನ್ನು ರಕ್ಷಿಸಲು ಅವರ ಪ್ರಯತ್ನಗಳನ್ನು ಪಾಕಿಸ್ತಾನ ವರ್ಲ್ಡ್ ಅಲೈಯನ್ಸ್ (PWA) ಮತ್ತು ವಕಾಲತ್ತು ಗುಂಪು ಗುರುತಿಸಿವೆ.
ಕಳೆದ ಡಿಸೆಂಬರಿನಲ್ಲಿ ಸ್ಥಾಪಿಸಲಾದ ವಕಾಲತ್ತು ಗುಂಪು PWA ಇಮ್ರಾನ್ ಖಾನ್ ಅವರ ನಾಮನಿರ್ದೇಶನವನ್ನು ಘೋಷಿಸಿತು. ಪಾರ್ಟಿಯೆಟ್ ಸೆಂಟ್ರಮ್ ಎಕ್ಸ್ ನಲ್ಲಿ ಘೋಷಣೆ ಮಾಡಿದ್ದು, “ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ನಾಮನಿರ್ದೇಶನ ಮಾಡುವ ಹಕ್ಕು ಹೊಂದಿರುವವರೊಂದಿಗೆ ಮೈತ್ರಿ ಮಾಡಿಕೊಂಡು, ಪಾಕಿಸ್ತಾನದಲ್ಲಿ ಮಾನವ ಹಕ್ಕುಗಳು ಮತ್ತು ಪ್ರಜಾಪ್ರಭುತ್ವಕ್ಕಾಗಿ ಅವರು ಮಾಡಿದ ಕೆಲಸಕ್ಕಾಗಿ ನೊಬೆಲ್ ಶಾಂತಿ ಪ್ರಶಸ್ತಿಗೆ ನಾಮನಿರ್ದೇಶನ ಮಾಡಲಾಗಿದೆ” ಎಂದು ತಿಳಿಸಿದೆ.
2019ರ ಆರಂಭದಲ್ಲಿ, ಇಮ್ರಾನ್ ಖಾನ್ ಅವರು ಭಾರತದೊಂದಿಗೆ ಉದ್ವಿಗ್ನತೆಯನ್ನು ಪರಿಹರಿಸಲು ಮಾಡಿದ ಪ್ರಯತ್ನಗಳಿಗೆ ನೊಬೆಲ್ ಶಾಂತಿ ಪ್ರಶಸ್ತಿಗೆ ನಾಮನಿರ್ದೇಶನಗೊಂಡರು. ಭಾರತೀಯ ವಾಯುಪಡೆಯ ಪೈಲಟ್ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರನ್ನು ಬಿಡುಗಡೆ ಮಾಡುವ ನಿರ್ಧಾರಕ್ಕಾಗಿ ಈ ನಾಮನಿರ್ದೇಶನ ಉಲ್ಲೇಖಿಸಲಾಗಿದೆ.
ಇಮ್ರಾನ್ ಖಾನ್ ಅವರು ಈಗ ಜೈಲಿನಲ್ಲಿದ್ದರೂ, ಮಾನವ ಹಕ್ಕುಗಳು ಮತ್ತು ಪ್ರಜಾಪ್ರಭುತ್ವಕ್ಕಾಗಿ ಅವರ ಸಾಧನೆಗಳಿಗಾಗಿ ಅವರನ್ನು ನೊಬೆಲ್ ಶಾಂತಿ ಪ್ರಶಸ್ತಿಗೆ ನಾಮನಿರ್ದೇಶನ ಮಾಡಲಾಗಿದೆ. 72 ವರ್ಷದ ಇಮ್ರಾನ್ ಖಾನ್ ಅವರ ವಿರುದ್ಧ ಭ್ರಷ್ಟಾಚಾರ ಮತ್ತು ಅಧಿಕಾರ ದುರುಪಯೋಗದ ಪ್ರಕರಣಗಳಲ್ಲಿ 14 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ.