Bengaluru : ಶುಕ್ರವಾರ ಸೂರ್ಯನು ದಕ್ಷಿಣಾಯಣದಿಂದ ಉತ್ತರಾಯಣಕ್ಕೆ ಪಥ ಬದಲಿಸುವ ವೇಳೆ ಸೂರ್ಯ ರಶ್ಮಿಯು ಗವಿಪುರದಲ್ಲಿರುವ ಐತಿಹಾಸಿಕ ಗವಿಗಂಗಾಧರೇಶ್ವರ ದೇಗುಲದ (Gavipura Gavi Gangadhareshwara Temple) ಶಿವಲಿಂಗವನ್ನು ಸ್ಪರ್ಶಿಸಿದೆ. ದೇಗುಲದ ಬಲಭಾಗದಲ್ಲಿರುವ ಕಿಟಕಿಯ ಸರಳುಗಳ ಮಧ್ಯದಿಂದ ಸಂಜೆ 5.17ರ ಸುಮಾರಿಗೆ ಗರ್ಭಗುಡಿ ಪ್ರವೇಶಿಸಿದ ಸೂರ್ಯ ಕಿರಣ , ನಂದಿ ವಿಗ್ರಹದ ಎಡಗಾಲನ್ನು ಸ್ಪರ್ಶಿಸಿ ಬಳಿಕ ಅದರ ಎರಡು ಶೃಂಗಗಳ ಮಧ್ಯಭಾಗದಿಂದ ಹಾದು ಗವಿ ಗಂಗಾಧರೇಶ್ವರನ ಪಾದ ಸ್ಪರ್ಶಿಸಿತು. ನಂತರ ನೋಡು ನೋಡುತ್ತಲೇ ಕಿರಣಗಳು ಲಿಂಗವನ್ನು ಪೂರ್ಣವಾಗಿ ಆವರಿಸಿದವು.
ಗಂಟೆ, ಜಾಗಟೆ ಹಾಗೂ ನಗಾರಿಯ ಸದ್ದುಗಳೊಂದಿಗೆ ಶಿವಲಿಂಗಕ್ಕೆ ನಿರಂತರವಾಗಿ ಕ್ಷೀರ ಹಾಗೂ ಎಳನೀರಿನ ಅಭಿಷೇಕ ಮಾಡಲಾಯಿತು. ಹರನ ಸ್ತೋತ್ರಗಳನ್ನು ಅಲ್ಲಿ ನೆರದಿದ್ದ ಅರ್ಚಕರು ಸ್ಮರಿಸುತ್ತಾ ಭಾವ ಪರವಶರಾದರು. Covid-19 ನಿಂದಾಗಿ ಈ ಬಾರಿ ದೇವಸ್ಥಾನಕ್ಕೆ ಭಕ್ತರ ಪ್ರವೇಶ ನಿರಾಕರಿಸಲಾಗಿತ್ತು.