ಅಮೆರಿಕ ಅಧ್ಯಕ್ಷ ಟ್ರಂಪ್ ನೀಡುತ್ತಿರುವ ವಾಗ್ದಾಳಿಗಳ ಮಧ್ಯೆ, ಟೆಕ್ ದೈತ್ಯ ಗೂಗಲ್ (Google) ಭಾರತದಲ್ಲಿ ಭಾರಿ ಹೂಡಿಕೆಗೆ ಮುಂದಾಗಿದೆ. ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿ ಸುಮಾರು ₹52,000 ಕೋಟಿ ವೆಚ್ಚದಲ್ಲಿ 1 ಗಿಗಾವ್ಯಾಟ್ ಸಾಮರ್ಥ್ಯದ ಡಾಟಾ ಸೆಂಟರ್ ಸ್ಥಾಪನೆ (Largest data center in Visakhapatnam)ಮಾಡಲು ಯೋಜನೆ ರೂಪಿಸಲಾಗಿದೆ.
ಈ ಡಾಟಾ ಸೆಂಟರ್ ಏಷ್ಯಾದಲ್ಲಿ ಗೂಗಲ್ ನಿರ್ಮಿಸಬೇಕಿರುವ ಅತಿದೊಡ್ಡ ಸೌಲಭ್ಯವಾಗಲಿದೆ. ಈಗಾಗಲೇ ಸಿಂಗಾಪುರ್, ಮಲೇಷ್ಯಾ ಮತ್ತು ಥಾಯ್ಲೆಂಡ್‍ನಲ್ಲಿ ಡಾಟಾ ಸೆಂಟರ್‌ಗಳು ಇದ್ದರೂ, ವಿಶಾಖಪಟ್ಟಣಂನ ಹೊಸ ಸೆಂಟರ್ ಅವುಗಳಿಗಿಂತ ದೊಡ್ಡದು.
ಈ ಯೋಜನೆಯ ಒಂದು ಭಾಗವಾಗಿ 2 ಬಿಲಿಯನ್ ಡಾಲರ್‌ನ ಹಸಿರು ಇಂಧನ ತಂತ್ರಜ್ಞಾನಗಳಿಗೂ ಹೂಡಿಕೆ ಮಾಡಲಾಗುವುದು. ಈ ಮೂಲಕ ಡಾಟಾ ಸೆಂಟರ್‌ಗೆ ಅಗತ್ಯವಿರುವ ವಿದ್ಯುತ್ ನಿರಂತರವಾಗಿ ದೊರೆಯುವಂತೆ ವ್ಯವಸ್ಥೆ ಮಾಡಲಾಗುತ್ತದೆ.
ಆಂಧ್ರದ ಐಟಿ ಸಚಿವ ನಾರಾ ಲೋಕೇಶ್ ಮಾಹಿತಿ ಪ್ರಕಾರ, ಇತರ ಕಂಪನಿಗಳೂ ಇಲ್ಲಿ ಡಾಟಾ ಸೆಂಟರ್ ಸ್ಥಾಪನೆಗೆ ಮುಂದಾಗಿದ್ದು, ಈಗಾಗಲೇ 1.6 ಗಿಗಾವ್ಯಾಟ್ ಸಾಮರ್ಥ್ಯದ ಯೋಜನೆಗಳಿಗೆ ಅನುಮೋದನೆ ಸಿಕ್ಕಿದೆ. ಮುಂದಿನ 5 ವರ್ಷಗಳಲ್ಲಿ 6 ಗಿಗಾವ್ಯಾಟ್ ಸಾಮರ್ಥ್ಯದ ಡಾಟಾ ಸೆಂಟರ್‌ಗಳನ್ನು ಆಂಧ್ರದಲ್ಲಿ ನಿರ್ಮಿಸುವ ಗುರಿಯಿದೆ.
ವಿಶಾಖಪಟ್ಟಣಂನಲ್ಲಿ ಮೂರು ಹೊಸ ಕೇಬಲ್ ಲ್ಯಾಂಡಿಂಗ್ ಸ್ಟೇಷನ್‌ಗಳನ್ನು ನಿರ್ಮಿಸಲು ಸರ್ಕಾರ ಯೋಜನೆ ಕೈಗೊಂಡಿದ್ದು, ಮುಂಬೈಗಿಂತ ಎರಡು ಪಟ್ಟು ದೊಡ್ಡ ಕೇಬಲ್ ಸಂಪರ್ಕವನ್ನು ಇಲ್ಲಿ ಹೊಂದಿಸಲಾಗುವುದು ಎಂದು ಸಚಿವರು ತಿಳಿಸಿದ್ದಾರೆ. ಈ ಕ್ರಮ ಡಿಜಿಟಲ್ ಸಂಪರ್ಕತೆಯು ಹೆಚ್ಚಿಸಲು ಮತ್ತು ಜಾಗತಿಕ ವೇಗದ ಡೇಟಾ ವಿನಿಮಯಕ್ಕೆ ಸಹಕಾರಿಯಾಗಲಿದೆ.