Patna: ಬಿಹಾರದ ಉದ್ಯಮಿ ಗೋಪಾಲ್ ಖೇಮ್ಕಾ (Gopal Khemka) ಹತ್ಯೆ ಪ್ರಕರಣದ ಪ್ರಮುಖ ಆರೋಪಿ ವಿಕಾಸ್ ಅಲಿಯಾಸ್ ರಾಜಾ ಎಂಬಾತನನ್ನು ಪೊಲೀಸ್ ಎನ್ಕೌಂಟರ್‌ನಲ್ಲಿ ಹತ್ಯೆ ಮಾಡಲಾಗಿದೆ. ಈ ಎನ್ಕೌಂಟರ್ ಇಂದು ಮುಂಜಾನೆ 2:45ಕ್ಕೆ ನಡೆದಿದೆ.
ತನಿಖೆ ನಡೆಸುತ್ತಿದ್ದ ಎಸ್‌ಐಟಿ ಮತ್ತು ಎಸ್ಟಿಎಫ್ ತಂಡಗಳು ವಿಕಾಸ್ ನನ್ನು ಬಂಧಿಸಲು ದಾಳಿ ನಡೆಸುತ್ತಿದ್ದಾಗ, ವಿಕಾಸ್ ಗುಂಡಿನ ದಾಳೆ ಮಾಡಲು ಯತ್ನಿಸಿದ. ಪ್ರತಿಯಾಗಿ ಪೊಲೀಸರು ಕೂಡ ಗುಂಡು ಹಾರಿಸಿದರು. ಗುಂಡೇಟು ತಗುಲಿ ವಿಕಾಸ್ ಸ್ಥಳದಲ್ಲೇ ಸಾವನ್ನಪ್ಪಿದನು.
ಸ್ಥಳದಲ್ಲಿ ಪೊಲೀಸರಿಗೆ ಒಂದು ಪಿಸ್ತೂಲ್, ಒಂದು ಬುಲೆಟ್ ಮತ್ತು ಕಾರ್ಟ್ರಿಡ್ಜ್ ಸಿಕ್ಕಿವೆ. ವಿಕಾಸ್ ಅಕ್ರಮವಾಗಿ ಶಸ್ತ್ರಾಸ್ತ್ರ ತಯಾರಿ ಮತ್ತು ಮಾರಾಟದಲ್ಲಿ ತೊಡಗಿದ್ದ ಎಂದು ಪೊಲೀಸ್ ಮಾಹಿತಿ ನೀಡಿದೆ. ಮರಣೋತ್ತರ ಪರೀಕ್ಷೆಗೆ ವಿಕಾಸ್ ನ ಶವವನ್ನು ನಳಂದಾ ಮೆಡಿಕಲ್ ಕಾಲೇಜಿಗೆ ಕಳುಹಿಸಲಾಗಿದೆ.
ಜುಲೈ 4ರಂದು ಪಟ್ನಾ ನಗರದ ಗಾಂಧಿ ಮೈದಾನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗೋಪಾಲ್ ಖೇಮ್ಕಾ ಅವರನ್ನು ಅವರ ಮನೆ ಹೊರಗೆ ಗೇಟ್ ಬಳಿ ಗುಂಡಿಟ್ಟು ಹತ್ಯೆ ಮಾಡಲಾಗಿತ್ತು. ಕಾರಿನಿಂದ ಇಳಿದ ತಕ್ಷಣ, ಹೆಲ್ಮೆಟ್ ಹಾಕಿದ ಶಂಕಿತ ವ್ಯಕ್ತಿ ಗುಂಡು ಹಾರಿಸಿ ಬೈಕಿನಲ್ಲಿ ಪರಾರಿಯಾಗಿದ್ದ.
ಗೋಪಾಲ್ ಖೇಮ್ಕಾ ಬಿಜೆಪಿ ಸಮರ್ಥಕರಾಗಿದ್ದರು. ಅವರು ಮಗಧ್ ಆಸ್ಪತ್ರೆಗೆ ಮಾಲೀಕರಾಗಿದ್ದು, ವಿವಿಧ ಸಮಾಜ ಸೇವಾ ಸಂಘಟನೆಗಳ ಜೊತೆಗೆ ಸಕ್ರಿಯರಾಗಿದ್ದರು.
2018ರ ಡಿಸೆಂಬರ್ 20ರಂದು ಗೋಪಾಲ್ ಖೇಮ್ಕಾ ಅವರ ಮಗ ಗುಂಜನ್ ಖೇಮ್ಕಾ ಕೂಡ ಹಾಜಿಪುರ್ ಇಂಡಸ್ಟ್ರಿಯಲ್ ಏರಿಯಾದಲ್ಲಿ ಗುಂಡು ಹಾರಿಸಿ ಹತ್ಯೆಗೀಡಾಗಿದ್ದರು.
ಈ ಪ್ರಕರಣ ಸಂಬಂಧ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಶೂಟರ್‌ಗೆ ಹಣಕೊಟ್ಟು ಹತ್ಯೆಗೆ ಆಜ್ಞೆ ನೀಡಿದ ವ್ಯಕ್ತಿಯೊಬ್ಬನು ಕೂಡ ಈಗ ಕಸ್ಟಡಿಯಲ್ಲಿದ್ದಾನೆ.