ನೂತನ ಮುಖ್ಯ ಚುನಾವಣಾ ಆಯುಕ್ತರಾಗಿ (Chief Election Commissioner) ಜ್ಞಾನೇಶ್ ಕುಮಾರ್ ಇಂದು ಅಧಿಕಾರ ಸ್ವೀಕರಿಸಿದರು. ಸಿಇಸಿಯಾಗಿ ಪದಗ್ರಹಣ ಮಾಡಿದ ನಂತರ, ಅವರು ದೇಶದ ಮತದಾರರಿಗೆ ಸಂದೇಶ ರವಾನಿಸಿದರು. ಮತದಾನವು ರಾಷ್ಟ್ರ ನಿರ್ಮಾಣದ ಪ್ರಮುಖ ಹಂತವಾಗಿದ್ದು, 18 ವರ್ಷ ತುಂಬಿದ ಪ್ರತಿಯೊಬ್ಬ ನಾಗರಿಕನೂ ಮತದಾನ ಮಾಡಬೇಕು ಎಂದು ಅವರು ಹೇಳಿದರು.
ಭಾರತದ ಸಂವಿಧಾನ, ಚುನಾವಣಾ ಕಾನೂನುಗಳು ಮತ್ತು ನಿಯಮಗಳ ಪ್ರಕಾರ, ಚುನಾವಣಾ ಆಯೋಗವು ಸದಾ ಮತದಾರರೊಂದಿಗೆ ಇರುತ್ತದೆ ಎಂದು ಕುಮಾರ್ ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸಮಿತಿಯ ಶಿಫಾರಸಿನ ಮೇರೆಗೆ, ರಾಷ್ಟ್ರಪತಿ ಅವರ ಆದೇಶದ ಮೂಲಕ ಫೆಬ್ರವರಿ 17 ರಂದು ಅವರು ಸಿಇಸಿಯಾಗಿ ನೇಮಕಗೊಂಡರು. ಇದು ಹೊಸ ಚುನಾವಣಾ ಆಯುಕ್ತರ ನೇಮಕಾತಿಗೆ ಸಂಬಂಧಿಸಿದ ಕಾನೂನಿನಡಿಯಲ್ಲಿ ಆಯ್ಕೆಗೊಂಡ ಮೊದಲ ಸಿಇಸಿ ಆಗಿದ್ದಾರೆ.
ಜ್ಞಾನೇಶ್ ಕುಮಾರ್ 1988ರ ಬ್ಯಾಚ್‌ನ ಕೇರಳ ಕೇಡರ್‌ಐಎಎಸ್ ಅಧಿಕಾರಿ. ಅವರು 2019ರಲ್ಲಿ ಜಮ್ಮು-ಕಾಶ್ಮೀರದ 370ನೇ ವಿಧಿ ರದ್ದತಿಗೆ ಹಾಗೂ ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಲು ಸಹಾಯ ಮಾಡಿದರು. ಆಗ ಅವರು ಗೃಹ ಸಚಿವಾಲಯದಲ್ಲಿ ಜಂಟಿ ಕಾರ್ಯದರ್ಶಿಯಾಗಿ (ಕಾಶ್ಮೀರ ವಿಭಾಗ) ಕಾರ್ಯನಿರ್ವಹಿಸುತ್ತಿದ್ದರು.
2020ರಲ್ಲಿ, ಗೃಹ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿಯಾಗಿ, ಅಯೋಧ್ಯೆಯ ರಾಮ ಮಂದಿರ ಸಂಬಂಧಿತ ಸುಪ್ರೀಂ ಕೋರ್ಟ್ ಪ್ರಕರಣದ ಪ್ರಮುಖ ಅಂಶಗಳನ್ನು ಮೇಲ್ವಿಚಾರಣೆ ಮಾಡಿದರು ಮತ್ತು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ರಚನೆಗೆ ಸಹಕಾರ ನೀಡಿದರು.