New York, US: ನ್ಯೂಯಾರ್ಕ್‌ನ Hudson ನದಿಯಲ್ಲಿ ಗುರುವಾರ ಒಂದು ಪ್ರವಾಸಿ ಹೆಲಿಕಾಪ್ಟರ್ ಪತನಗೊಂಡಿದೆ (Helicopter crash). ಈ ದುರ್ಘಟನೆಯಲ್ಲಿ ಮೂವರು ಮಕ್ಕಳು ಸೇರಿದಂತೆ ಆರು ಜನರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ಮೃತರಲ್ಲಿ ಪೈಲಟ್ ಹಾಗೂ ಸ್ಪೇನ್‌ನ ಪ್ರವಾಸಿಗರ ಕುಟುಂಬದ ಸದಸ್ಯರೂ ಸೇರಿದ್ದಾರೆ. ಅಪಘಾತ ಮಧ್ಯಾಹ್ನ ಪಿಯರ್ 40 ಬಳಿ ಸಂಭವಿಸಿದೆ. ಬೆಲ್ 206L-4 ಲಾಂಗ್ರೇಂಜರ್ IV ಹೆಲಿಕಾಪ್ಟರ್, ಲೋವರ್ ಮ್ಯಾನ್ಹ್ಯಾಟನ್‌ನಿಂದ ಹೊರಟು, ಲಿಬರ್ಟಿ ಪ್ರತಿಮೆಯನ್ನು ಸುತ್ತು ಹಾಕಿದ ಬಳಿಕ, ಉತ್ತರಕ್ಕೆ ಹಡ್ಸನ್ ನದಿಯ ಮೇಲಿಂದ ಜಾರ್ಜ್ ವಾಷಿಂಗ್ಟನ್ ಬ್ರಿಡ್ಜ್ನತ್ತ ಹೊರಟಿತ್ತು. ಈ ಸಂದರ್ಭದಲ್ಲಿ ಏಕಾಏಕಿ ದಕ್ಷಿಣಕ್ಕೆ ತಿರುಗಿದ ಹೆಲಿಕಾಪ್ಟರ್ ನ್ಯೂಜೆರ್ಸಿ ಬಳಿ ನದಿಗೆ ಅಪ್ಪಳಿಸಿದೆ.
ಸ್ಥಳಕ್ಕೆ ತುರ್ತು ವಾಹನಗಳು ತಕ್ಷಣವೇ ಧಾವಿಸಿದ್ದು, ಟ್ರಾಫಿಕ್ ಜಾಮ್ ಆಗುವ ಸಾಧ್ಯತೆ ಇದೆ. ವೆಸ್ಟ್ ಸೈಡ್ ಹೈವೇ ಮತ್ತು ಸ್ಪ್ರಿಂಗ್ ಸ್ಟ್ರೀಟ್ ಸುತ್ತಮುತ್ತ ತುರ್ತು ವಾಹನ ಸಂಚರಿಸುತ್ತಿವೆ ಎಂದು NYPD ತಿಳಿಸಿದೆ.
ಅಪಘಾತ ಸಂದರ್ಭದಲ್ಲಿ ವಾತಾವರಣ ಮೋಡಕವಿದದ್ದು, ಗಾಳಿ ಬಲವಾಗಿ ಬೀಸುತ್ತಿದ್ದರೂ, ಗೋಚರತೆ ಸರಿಹೊಂದಿತ್ತು. ಸಣ್ಣ ಪ್ರಮಾಣದಲ್ಲಿ ಮಳೆಯೂ ಆಗುತ್ತಿದ್ದಿತು.
ಈ ಘಟನೆಯನ್ನು ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ (ಎಫ್ಎಎ) ದೃಢಪಡಿಸಿದ್ದು, ರಾಷ್ಟ್ರೀಯ ಸಾರಿಗೆ ಸುರಕ್ಷತಾ ಮಂಡಳಿ (ಎನ್ಟಿಎಸ್ಬಿ)ಯೊಂದಿಗೆ ತನಿಖೆ ನಡೆಸುತ್ತಿದೆ.